ಮಡಿಕೇರಿ, ಅ. ೬: ಕೊಡಗು ಜಿಲ್ಲೆಯನ್ನು ಪ್ರತ್ಯೇಕ ಲೋಕಸಭಾ ಕ್ಷೇತ್ರವನ್ನಾಗಿಸಬೇಕೆಂಬ ಶಿಫಾರಸನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಚಿಸಿದ್ದ ಸತ್ಯಶೋಧನಾ ಸಮಿತಿ ಮಾಡಿದೆ.
ಲೋಕಸಭಾ ಚುನಾವಣೆಯ ಸೋಲಿನ ಕುರಿತು ಮಾಹಿತಿ, ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಎಐಸಿಸಿ, ಕೆಪಿಸಿಸಿಗೆ ಸೂಚಿಸಿದ್ದ ಹಿನ್ನೆಲೆ ಸತ್ಯಶೋಧನಾ ಸಮಿತಿ ರಾಜ್ಯದಲ್ಲಿ ಚಿಂತನ-ಮAಥನ ಸಭೆಗಳನ್ನು ನಡೆಸಿ ಪರಾಮರ್ಶೆ ನಡೆಸಿತ್ತು.
ಅದರ ಭಾಗವಾಗಿ ಕೊಡಗಿನಲ್ಲಿಯೂ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ನೇತೃತ್ವದ ಸತ್ಯಶೋಧನಾ ಸಮಿತಿ ನಡೆಸಿದ ಸಭೆಯಲ್ಲಿ ಕೊಡಗು ಪ್ರತ್ಯೇಕ ಕ್ಷೇತ್ರವಾಗದಿರುವುದು ಸೋಲಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಕ್ಷೇತ್ರವಾಗಿ ಕೊಡಗನ್ನು ಮಾಡಬೇಕೆಂಬ ವರದಿ ನೀಡಿದ್ದು, ಸಿ ರಾಜ್ಯವಾಗಿದ್ದ ಕೊಡಗು ಬಳಿಕ ಮಂಗಳೂರಿನೊAದಿಗೆ ಅನಂತರ ಮೈಸೂರು ಕ್ಷೇತ್ರದೊಂದಿಗೆ ಸೇರಿಕೊಂಡಿತು. ಈಶಾನ್ಯ ರಾಜ್ಯಗಳಲ್ಲಿ ಅಲ್ಪ ಜನಸಂಖ್ಯೆಗೂ ಪ್ರತ್ಯೇಕ ಲೋಕಸಭಾ ಕ್ಷೇತ್ರ ಇರುವಂತೆ ಕೊಡಗನ್ನು ಪರಿಗಣಿಸಿ ಪ್ರತ್ಯೇಕ ಲೋಕಸಭಾ ಕ್ಷೇತ್ರ ಮಾಡುವುದು ಒಳಿತು ಎಂದು ತಿಳಿಸಿದೆ.
೨೦೨೬ರಲ್ಲಿ ಕ್ಷೇತ್ರ ಪುನರ್‌ವಿಂಗಡನೆ ಸಂದರ್ಭ ರಾಜ್ಯ ಸರಕಾರ ಈ ಕುರಿತು ಕೇಂದ್ರದ ಗಮನ ಸೆಳೆದು ಪ್ರತ್ಯೇಕ ಲೋಕಸಭಾ ಕ್ಷೇತ್ರಕ್ಕೆ ಬೇಡಿಕೆ ಇಡಲಿದೆ ಎನ್ನಲಾಗಿದೆ.
ವೀರಾಜಪೇಟೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರೊಂದಿಗೂ ಸುದರ್ಶನ್ ಚರ್ಚಿಸಿದ್ದು, ಕ್ಷೇತ್ರ ಪುನರ್‌ವಿಂಗಡನೆ ಮಸೂದೆ ಅಂಗೀಕಾರ ಸಂದರ್ಭ ಕರ್ನಾಟಕದ ಸಂಸದರು ಈ ಕುರಿತು ಧ್ವನಿ ಎತ್ತುವಂತೆ ಸಲಹೆ ನೀಡಿದ್ದಾರೆ.