ಗೋಣಿಕೊಪ್ಪಲು, ಅ. ೬: ಮೈನವಿರೇಳಿಸುವ ನೃತ್ಯರೂಪಕಗಳು ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ಮೆರುಗು ನೀಡಿದವು. ಗೋಣಿಕೊಪ್ಪ ದಸರಾ ಅಂಗವಾಗಿ ಕಾವೇರಿ ಕಲಾವೇದಿಕೆಯಲ್ಲಿ ಶನಿವಾರ ರಾತ್ರಿ ನಡೆದ ಯುವದಸರಾ ಕಾರ್ಯಕ್ರಮ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ನೃತ್ಯ ಸ್ಪರ್ಧೆ, ಡಿಜೆ ಪ್ರದರ್ಶನ ಸೇರಿದಂತೆ ನಾನಾ ಕಾರ್ಯಕ್ರಮಗಳು ಯುವ ಸಮೂಹದ ಸಂಭ್ರಮವನ್ನು ದುಪ್ಪಟ್ಟುಗೊಳಿಸಿದವು. ಮಳೆಯ ನಡುವೆಯೂ ಪ್ರೇಕ್ಷಕರು ಯುವ ದಸರಾ ಕಣ್ತುಂಬಿಕೊಳ್ಳಲು ಹರಿದುಬಂದರು.
ಯುವ ದಸರಾ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ವಿವಿಧ ತಂಡಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದವು. ವಿಷ್ಣುವಿನ ದಶಾವತಾರ, ಮಹಿಷಾಸುರ ಮರ್ಧನ, ಪುಷ್ಪಾಂಜಲಿ ನೃತ್ಯ, ತಾರಾಕಸುರನ ವಧೆ ಸೇರಿದಂತೆ ಒಂದಕ್ಕೊAದು ಮೀರಿಸುವಂತಹ ನೃತ್ಯ ಪ್ರದರ್ಶನಗಳು ಕಾವೇರಿ ಕಲಾ ವೇದಿಕೆಯಲ್ಲಿ ಮೂಡಿಬಂದವು. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿವಿಧ ಭಾಗದಿಂದ ೧೨ ತಂಡಗಳು ಭಾಗವಹಿಸಿ ಪ್ರದರ್ಶನ ನೀಡಿದವು.
ರಾಜ್ಯಮಟ್ಟದ ನೃತ್ಯ ಪ್ರದರ್ಶನದಲ್ಲಿ ತೀರ್ಪುಗಾರರಾಗಿ ಸದ್ವೀನ್, ವಿದುಷಿ ಎಂ.ಡಿ. ದೇಚಮ್ಮ ಕಾರ್ಯನಿರ್ವಹಿಸಿದರು.
ಪೌರಾಣಿಕ ಹಿನ್ನೆಲೆಯ ನೃತ್ಯರೂಪಕ ಸೇರಿದಂತೆ ವೆಸ್ಟರ್ನ್, ಕ್ಲಾಸಿಕಲ್, ಫಿಲ್ಮಿ, ಹಿಪ್‌ಹಾಪ್ ನೃತ್ಯ ಪ್ರಾಕಾರ ಪ್ರೇಕ್ಷಕರಿಗೆ ಮುದನೀಡುವಲ್ಲಿ ಯಶಸ್ವಿಯಾಯಿತು.
ಕೇರಳದ ತಂಡದಿAದ ವಾಟರ್ ಡ್ರಮ್ ಡ್ಯಾನ್ಸ್ ಪ್ರದರ್ಶನ ವಿನೂತನ ಅನುಭವ ನೀಡಿತು. ಡಿಜೆಗೆ ಜನತೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿತು.
ವಿಜೇತರ ವಿವರ
ಯುವ ದಸರಾ ಅಂಗವಾಗಿ ನಡೆದ ನೃತ್ಯ ಸ್ಪರ್ಧೆಯ ಮೊದಲನೇ ಬಹುಮಾನವನ್ನು ಟೀಂ ಲ್ಯಾಬ್ಸ್ ಮಡಿಕೇರಿ ಪಡೆದುಕೊಂಡಿತು. ಎರಡನೇ ಬಹುಮಾನವನ್ನು ನಾಟ್ಯಕಲಾ ಮಡಿಕೇರಿ, ಮೂರನೇ ಬಹುಮಾನವನ್ನು ಕಿಂಗ್ಸ್ ಆಫ್ ಕೂರ್ಗ್ ಮಡಿಕೇರಿ ತನ್ನದಾಗಿಸಿಕೊಂಡಿತು. ಸಮಾಧಾನಕರ ಬಹುಮಾನವನ್ನು ಕುಟ್ಟದ ಪುಷ್ಪಾಂಜಲಿ ನೃತ್ಯ ತಂಡ ಪಡೆದುಕೊಂಡಿತು.