ವೀರಾಜಪೇಟೆ, ಅ. ೬: ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ಐಕ್ಯೂಎಸಿ, ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ಘಟಕದ ಸಹಯೋಗದಲ್ಲಿ ಕೌಸ್ತುಬಾ ಸಭಾ ಭವನದಲ್ಲಿ ವಿದ್ಯಾರ್ಥಿಗಳಿಗೆ ಒಂದು ದಿನದ ಪ್ರಥಮ ಚಿಕಿತ್ಸಾ ಕಾರ್ಯಾಗಾರ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಬೆನಡಿಕ್ಟ್ ಆರ್. ಸಲ್ದಾನ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಥಮ ಚಿಕಿತ್ಸೆಯ ಅವಶ್ಯಕತೆ ಯಾವ ಸಂದರ್ಭದಲ್ಲಾದರು ಎದುರಾಗಬಹುದು ತೋಟ ಗದ್ದೆಗಳಲ್ಲಿ ಕೆಲಸ ಮಾಡುವಾಗ, ಸಾರ್ವಜನಿಕ ಸ್ಥಳಗಳಲ್ಲಿ ಇರುವಾಗ ಮುಂತಾದ ಕಡೆ ನಮ್ಮವರಿಗಾಗಲಿ, ಇತರರಿಗೆ ಏನಾದರು ತೊಂದರೆ ಆದಂತಹ ಸಂದರ್ಭ ಅವರ ಜೀವ ಉಳಿಸಲು ನಮ್ಮ ಕೈಯಲ್ಲಿ ಆದಂತಹ ಪ್ರಯತ್ನ ಮಾಡಬೇಕು ಎಂದರು. ಪ್ರಥಮ ಚಿಕಿತ್ಸೆಯ ಬಗ್ಗೆ ನಮ್ಮಲ್ಲಿ ಜ್ಞಾನವಿದ್ದರೆ ಏನಾದರೂ ತೊಂದರೆ ಉಂಟಾದಾಗ ಸರಿಯಾದ ಕ್ರಮದಲ್ಲಿ ಅವರ ಜೀವ ಉಳಿಸಲು ಪ್ರಯತ್ನಿಸಬಹುದು ಎಂದರು.

ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ. ಕಲ್ಪಿತಾ ಮತ್ತು ಡಾ. ಗಂಗಾ ಸೋಮಯ್ಯ ಅವರು ಸ್ವಯಂ ಸೇವಕರ ಸಹಾಯದಿಂದ ಕಾರ್ಡಿಯೋಪನಾರಿ ತೊಂದರೆ ಆದಾಗ, ಪಿಡ್ಸ್ ಅಥವಾ ಸೆಳೆತಕ್ಕೆ ಯಾರಾದರು ಒಳಗಾದಾಗ, ಹಾವು, ವಿಷಜಂತುಗಳ ಕಡಿತಕ್ಕೆ ತುತ್ತಾದಾಗ, ತಲೆಯ ಭಾಗಕ್ಕೆ ಗಾಯವಾಗಿ ರಕ್ತಸ್ರಾವ ಆಗುವ ಕ್ಷಣ, ಹಾಗೂ ಆಹಾರ ಸೇವನೆ ಸಂದರ್ಭ ಗಂಟಲಿನಲ್ಲಿ ಆಹಾರ ಸಿಲುಕಿ ಉಸಿರುಗಟ್ಟುವ. ಸಂದರ್ಭದಲ್ಲಿ ತೊಂದರೆಗೆ ಒಳಗಾದವರನ್ನು ಹೇಗೆ ಉಪಚರಿಸಬೇಕು, ಯಾವ ರೀತಿಯಲ್ಲಿ ಪ್ರಥಮ ಚಿಕಿತ್ಸೆ ನೀಡಬೇಕೆಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಪ್ರಿಯಾ, ವಿದ್ಯಾರ್ಥಿ ಕ್ಷೇಮ ಪಾಲನಾ ಸಂಘದ ಸಂಚಾಲಕ ನಾಗರಾಜು ಎನ್.ಸಿ.ಸಿ ಅಧಿಕಾರಿ ಭೋಜಮ್ಮ ಎನ್‌ಎಸ್‌ಎಸ್ ಅಧಿಕಾರಿ ಸುನಿಲ್ ಕುಮಾರ್, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.