ಮಡಿಕೇರಿ ಅ. ೬: ಕೊಡವ ಮಕ್ಕಡ ಕೂಟದ ೯೫ನೇ ಪುಸ್ತಕ, ಬರಹಗಾರ್ತಿ ಸುಮನ್ ಸೀತಮ್ಮ ಅವರು ರಚಿಸಿರುವ “ಭಾವಸ್ತುತಿ” ಯನ್ನು ಬಿಡುಗಡೆ ಮಾಡಲಾಯಿತು.
ನಗರದ ಪತ್ರಿಕಾ ಭವನದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಬರಹಗಾರರು ಹಾಗೂ ಸಮಾಜಸೇವಕರಾದ ತೆನ್ನಿರ ಟೀನಾ ಚಂಗಪ್ಪ, ಹೊಸ ಹೊಸ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಬರಬೇಕು. ಸಾಹಿತ್ಯಾಭಿಮಾನಿಗಳು ಆರ್ಥಿಕ ಸಹಕಾರ ಮತ್ತು ನೆರವು ನೀಡುತ್ತಾರೆ. ಆರ್ಥಿಕತೆಯ ಕಾರಣದಿಂದ ಬರಹ ಗಾರರು ಹಿಂದೆ ಸರಿಯಬಾರದು ಎಂದರು.
ಸಾಹಿತ್ಯ ಕ್ಷೇತ್ರ ಮತ್ತು ಬರಹಗಾರರಿಗೆ ಕೊಡವ ಮಕ್ಕಡ ಕೂಟ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ. ಕೂಟದ ೧೦೦ನೇ ಪುಸ್ತಕ ಸದ್ಯದಲ್ಲಿಯೇ ಬಿಡುಗಡೆ ಯಾಗುತ್ತಿದ್ದು, ಮತ್ತಷ್ಟು ಪುಸ್ತಕಗಳು ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರ ಪರಿಶ್ರಮದಿಂದ ಸಾಹಿತ್ಯಲೋಕಕ್ಕೆ ಸಿಗಲಿ ಎಂದು ಹಾರೈಸಿದರು.“ಭಾವಸ್ತುತಿ” ಪುಸ್ತಕದ ಬರಹ ಗಾರರಾದ ಬೊಟ್ಟಂಗಡ ಸುಮನ್ ಸೀತಮ್ಮ ಮಾತನಾಡಿ ಸಾಮಾಜಿಕ ಜಾಲತಾಣದ ಪ್ರಭಾವದಿಂದಾಗಿ ಓದುಗರ ಸಂಖ್ಯೆ ಕಡಿಮೆ ಯಾಗುತ್ತಿದ್ದು, ಪತ್ರಿಕೆ ಮತ್ತು ಪುಸ್ತಕ ಕಡೆಗಣಿಸಲ್ಪಡುತ್ತಿದೆ. ಮನೆ ಹಾಗೂ ಶಾಲೆಯಿಂದಲೇ ಓದುವ ಹವ್ಯಾಸ ಸೃಷ್ಟಿಯಾಗಬೇಕು ಎಂದರು.
ಸಮಾಜ ಸೇವಕರಾದ ಬಾಳೆಯಡ ಮೀನಾ ಕುಮಾರಿ ಮಾತನಾಡಿ, ಪುಸ್ತಕಗಳನ್ನು ಓದುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಯಾವುದೇ ಸನ್ನಿವೇಶ ಎದುರಾದರೂ ಪುಸ್ತಕಗಳನ್ನು ಓದಿ ನೆಮ್ಮದಿ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ಕನ್ನಡ ಮತ್ತು ಕೊಡವ ಭಾಷೆಯಲ್ಲಿ ರಚಿಸಿರುವ “ಕಾವೇರಿ ಸುಪ್ರಭಾತ” ಪುಸ್ತಕವನ್ನು ತಾ.೧೬ ರಂದು ಪತ್ರಿಕಾ ಭವನದಲ್ಲಿ ಬಿಡುಗಡೆ ಮಾಡಲಾಗುವುದು. ಕಾವೇರಿ ತುಲಾ ಸಂಕ್ರಮಣದ ದಿನವಾದ ತಾ.೧೭ ರಂದು ತಲಕಾವೇರಿಯಲ್ಲಿ ಉಚಿತ ವಾಗಿ ವಿತರಿಸಲಾಗುವುದು ಎಂದರು.
ಬರಹಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೊಡವ ಮಕ್ಕಡ ಕೂಟ ಪುಸ್ತಕಗಳನ್ನು ಪ್ರಕಟಿಸಿ ಓದುಗರಿಗೆ ಉಚಿತವಾಗಿ ನೀಡುತ್ತಿದೆಯೇ ಹೊರತು ಮಾರಾಟ ಮಾಡುತ್ತಿಲ್ಲ. ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಓದುವ ಹವ್ಯಾಸ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಉತ್ಸಾಹಿ ಬರಹಗಾರರು ಮುಂದೆ ಬಂದರೆ ಪುಸ್ತಕ ಪ್ರಕಟಣೆಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ತಾ. ೨೬ ರಂದು ೯೯ನೇ ಪುಸ್ತಕ ಮತ್ತು ನವೆಂಬರ್‌ನಲ್ಲಿ ೧೦೦ನೇ ಪುಸ್ತಕವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಗುವುದು ಎಂದು ಬೊಳ್ಳಜಿರ ಅಯ್ಯಪ್ಪ ಹೇಳಿದರು.
ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಖಜಾಂಚಿ ಉಳ್ಳಿಯಡ ಗಂಗಮ್ಮ ನಂಜಪ್ಪ ಹಾಗೂ ಬರಹಗಾರ ಬೊಟ್ಟಂಗಡ ತಿಲಕ್ ಉಪಸ್ಥಿತರಿದ್ದರು.