ಶನಿವಾರಸಂತೆ, ಅ. ೬: ಪಟ್ಟಣದ ಕಂದಾಯ ಇಲಾಖೆಯಲ್ಲಿ ಇರುವ ಅಟಲ್ ಜಿ ಜನಸ್ನೇಹಿ ಕೇಂದ್ರದಲ್ಲಿ ಆಧಾರ್ ಸೇವೆ ನಿಂತು ಹೋಗಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಕರವೇ ತಾಲೂಕು ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಇಲಾಖೆಯ ಉಪ ತಹಶೀಲ್ದಾರ್ ಮಧುಸೂಧನ್ ಅವರಿಗೆ ಮನವಿ ಸಲ್ಲಿಸಿದರು. ಕೇಂದ್ರದಲ್ಲಿ ಆಧಾರ್ ಸೇವೆ ನಿಂತು ಹೋಗಿ ವರ್ಷವೇ ಕಳೆದಿದೆ.ಜನರು ಆಧಾರ್ ಸೇವೆ ಮಾಡಿಸಲು ಅರಕಲಗೂಡು ಹಾಗೂ ಸೋಮವಾರಪೇಟೆಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಂಪ್ಯೂಟರ್ ಅನ್ನು ಶೀಘ್ರ ದುರಸ್ತಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ಲಭಿಸುವಂತೆ ಪುನರಾರಂಭಿಸಬೇಕು ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕಾರ್ಯದರ್ಶಿ ರಾಮನಳ್ಳಿ ಪ್ರವೀಣ್, ರಾಮನಳ್ಳಿ ಘಟಕದ ಉಪಾಧ್ಯಕ್ಷ ರಕ್ಷಿತ್, ಸದಸ್ಯರಾದ ಮೋಹನ್, ರಂಜಿತ್ ಹಾಗೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.