ಮಡಿಕೇರಿ, ಅ. ೬: ಕೊಡಗಿನ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ತಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ರಾಜ್ಯ ಕೃಷಿ ಸಚಿವ ಚೆಲುವರಾಯಸ್ವಾಮಿ ಭರವಸೆ ನೀಡಿದರು.

ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಅವರ ಪ್ರಯತ್ನದ ಫಲವಾಗಿ ದಸರಾ ಉತ್ಸವದ ಪ್ರಯುಕ್ತ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಕಾಫಿ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗಿನ ಜನರು ಶಿಸ್ತಿನ ಜೀವನಕ್ಕೆ ಹೆಸರುವಾಸಿಯಾಗಿದ್ದಾರೆ. ಕೊಡಗು ಜಿಲ್ಲೆ ರಾಜ್ಯಕ್ಕೆ ನೀರುಣಿಸುವ ಜಿಲ್ಲೆಯಾಗಿದೆ. ಆದರೆ ಇಲ್ಲಿನ ಜನತೆ ಮಳೆಗಾಲದ ಸಂದರ್ಭ ತೀವ್ರ ಸಂಕಷ್ಟ ಅನುಭವಿಸುತ್ತಾರೆ. ಇಲ್ಲಿನವರ ನೋವಿಗೆ ಸ್ಪಂದಿಸಬೇಕಾದುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ದಿಸೆಯಲ್ಲಿ ಸರ್ಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸಲಿದೆ ಎಂದು ಚೆಲುವರಾಯಸ್ವಾಮಿ ಆಶ್ವಾಸನೆಯಿತ್ತರು.

ಬೆಳೆಗಾರರಿಗೆ ಅಗತ್ಯ ಸವಲತ್ತುಗಳನ್ನು ಒದಗಿಸುವ ಮೂಲಕ ಅವರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತಾನು ಜಿಲ್ಲೆಯ ಇಬ್ಬರು ಶಾಸಕರು ಹಾಗೂ ತೋಟಗಾರಿಕಾ ಸಚಿವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ಗಂಗಾ ಆರತಿಯಂತೆ ಕಾವೇರಿ ಕ್ಷೇತ್ರದಲ್ಲಿ ಕಾವೇರಿ ಆರತಿಯನ್ನು ಮಾಡಬೇಕೆಂಬ ಚಿಂತನೆಯಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಲಿದೆ. ರಾಜ್ಯದ ೨೨೪ ತಾಲೂಕುಗಳಲ್ಲಿ ಕೃಷಿ ಹೊಂಡ ಮಾಡಲು ಇಲಾಖೆಯಿಂದ ನಿರ್ಧರಿಸಲಾಗಿದ್ದು, ಕೊಡಗು ಜಿಲ್ಲೆಗೂ ೨೫೦ ಕೃಷಿ ಹೊಂಡಗಳನ್ನು ಮಂಜೂರು ಮಾಡಲಾಗುವುದು ಎಂದು ಸಚಿವರು ಹೇಳಿದರು.

ವಿಶೇಷ ಅನುದಾನ ಒದಗಿಸಬೇಕು

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವೀರಾಜಪೇಟೆ ಕ್ಷೇತ್ರದ ಶಾಸಕರೂ ಆದ ಎ.ಎಸ್. ಪೊನ್ನಣ್ಣ ಮಾತನಾಡಿ, ಮಳೆಯಿಂದಾಗಿ ಕೊಡಗಿನ ರಸ್ತೆಗಳು ಸೇರಿದಂತೆ ಬಹಳಷ್ಟು ಹಾನಿಗಳಾಗಿದ್ದು, ಸರ್ಕಾರದಿಂದ ವಿಶೇಷ ಅನುದಾನ ಒದಗಿಸಲು ಸಹಕರಿಸಬೇಕೆಂದು ಸಚಿವರುಗಳಲ್ಲಿ ಮನವಿ ಮಾಡಿದರು. ಕಾಫಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು, ಕಾಫಿ ಮಂಡಳಿ ಅಧ್ಯಕ್ಷರು ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕೆಂದರು.

೩ಆರನೇ ಪುಟಕ್ಕೆ

(ಮೊದಲ ಪುಟದಿಂದ)

ಕಾಫಿ ಉತ್ಪಾದನೆ ದುಪ್ಪಟ್ಟು ಮಾಡಲು ಯೋಜನೆ

ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಮಾತನಾಡಿ, ಕಾಫಿ ಮಂಡಳಿಯು ‘ಮಣ್ಣಿನಿಂದ ಮಾರುಕಟ್ಟೆವರೆಗೆ’ ಎಂಬ ತತ್ವದೊಂದಿಗೆ ಕೆಲಸ ಮಾಡುತ್ತಿದ್ದು, ಕಾಫಿ ಉತ್ಪಾದನೆಯನ್ನು ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದರು. ಕೊಡಗಿನಿಂದ ೧ ಲಕ್ಷದ ೩೦ ಸಾವಿರ ಟನ್ ಕಾಫಿ ದೊರೆಯುತ್ತಿದ್ದು, ಇಲ್ಲಿ ಮಾನವ ಹಾಗೂ ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು. ಮಾನವ - ವನ್ಯಜೀವಿ ಸಂಘರ್ಷಕ್ಕೆ ಪರಿಹಾರೋಪಾಯ ಕಂಡು ಹಿಡಿಯಲು ಮಂಡಳಿಯಿAದ ಆನೆಗಳ ಬಗ್ಗೆ ಅಧ್ಯಯನ ಮಾಡಿದ ವರ್ಮ ಎಂಬವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಒಂದು ವರ್ಷದೊಳಗೆ ವರದಿ ಬರಲಿದೆ. ಕೇಂದ್ರ ಸರ್ಕಾರ ಕಾಫಿ ಮಂಡಳಿಗೆ ೩೦೭ ಕೋಟಿ ರೂ. ಅನುದಾನ ನೀಡಿದ್ದು, ಇದರಲ್ಲಿ ೧೯ ಕೋಟಿ ರೂ.ಗಳನ್ನು ಕೊಡಗು ಜಿಲ್ಲೆಗೆ ಮೀಸಲಿಡಲಾಗಿದೆ. ಮಳೆಯಿಂದ ಬೆಳೆಹಾನಿ ಸಂಬAಧ ಕಂದಾಯ, ತೋಟಗಾರಿಕಾ ಇಲಾಖೆ, ಕಾಫಿ ಮಂಡಳಿ ಒಟ್ಟಾಗಿ ಸರ್ವೆ ನಡೆಸುತ್ತಿದ್ದು, ಸರ್ವೆ ಪೂರ್ಣಗೊಂಡ ಬಳಿಕ ಎನ್‌ಡಿಆರ್‌ಎಫ್ ಮಾರ್ಗ ಸೂಚಿಯಂತೆ ಕೇಂದ್ರ ಸರ್ಕಾರದಿಂದ ಪರಿಹಾರ ಬಿಡುಗಡೆಯಾಗಲಿದೆ ಎಂದು ಅವರು ನುಡಿದರು.

ಕಾಫಿಗೂ ಮಾನ್ಯತೆ ಸಿಗಬೇಕು

ಜಿಲ್ಲಾಧಿಕಾರಿ, ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರಾದ ವೆಂಕಟ್‌ರಾಜಾ ಮಾತನಾಡಿ, ಐತಿಹಾಸಿಕ ಮಡಿಕೇರಿ ದಸರಾ ಉತ್ಸವದಲ್ಲಿ ಕಾಫಿಗೂ ಮಾನ್ಯತೆ ಸಿಗಬೇಕು. ಕಾಫಿ ಕ್ಷೇತ್ರವೂ ಬೆಳೆಯಬೇಕು ಎಂಬ ಉದ್ದೇಶದಿಂದ ಕಾಫಿ ದಸರಾ ಹಮ್ಮಿಕೊಳ್ಳಲಾಗಿದೆ ಎಂದರು.

ಬೆಳೆಗಾರರು ಕಷ್ಟದಲ್ಲಿದ್ದಾರೆ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಮಾತನಾಡಿ, ಕಾಫಿಗೆ ಉತ್ತಮ ಬೆಲೆ ಇದ್ದರೂ ಕೂಡ ಬೆಳೆಗಾರರು ಇಂದಿಗೂ ಸಂಕಷ್ಟದಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆಗಾರರ ಸಂಕಷ್ಟಗಳಿಗೆ ಸ್ಪಂದಿಸುವAತಾಗಬೇಕೆAದ ಅವರು, ಕಾಫಿ ದಸರಾ ನಿರಂತರವಾಗಿ ಮುಂದುವರೆಯಬೇಕೆAದು ನುಡಿದರು. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಬಳಿಕ ಅತಿಥಿಗಳು ಕಾಫಿ ಕಪ್‌ಗೆ ಕಾಫಿ ಸುರಿದು ಕಾಫಿ ದಸರಾಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭ ಕಾಫಿ ಮಳಿಗೆಗಳಿಗೆ ತೆರಳಿ ಕಾಫಿ ಸವಿದರು.

ವೇದಿಕೆಯಲ್ಲಿ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ. ರಾಜೀವ್, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಾ ಬೆಳ್ಯಪ್ಪ, ಉಪಾಸಿ ಮಾಜಿ ಅಧ್ಯಕ್ಷರಾದ ವಿನೋದ್ ಶಿವಪ್ಪ, ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್‌ಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಉಪವಿಭಾಗಾಧಿಕಾರಿ ವಿನಾಯಕ್ ನರ್ವಾಡೆ, ಅಕ್ಕ ಸಮ್ಮೇಳನ ಸಂಘಟಕ ಬಸವರಾಜ್, ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ಅನಿತಾ ನಂದ ಮತ್ತಿತರರಿದ್ದರು.

ಆಕಾಶವಾಣಿ ಉದ್ಘೋಷಕ ವಿನೋದ್ ಮೂಡಗದ್ದೆ ನಿರೂಪಿಸಿ, ಲಹರಿ ಶಿಕ್ಷಕರ ಬಳಗದವರು ನಾಡಗೀತೆ, ರೈತಗೀತೆ ಹಾಡಿದರು. ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಸ್ವಾಗತಿಸಿ, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ವಂದಿಸಿದರು.

ವಿವಿಧ ಮಳಿಗೆಗಳು

ಕಾಫಿ ದಸರಾ ಪ್ರಯುಕ್ತ ಕಾಫಿ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಫಿ ಮಳಿಗೆಗಳು ಸೇರಿದಂತೆ ವಿವಿಧ ಮಳಿಗೆಗಳನ್ನು ತೆರೆಯಲಾಗಿದೆ. ಕಾಫಿ ಮಂಡಳಿ, ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘ, ಫಿಫ್ತ್ ಸೆಂಟ್ರೇಷನ್ ಕಾಫಿ, ದಕ್ಷತ್ ಕಾಫಿ, ಮೀನುಗಾರಿಕಾ ಇಲಾಖೆ, ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಜಿ.ಪಂ. ಗ್ರಾಮೀಣ ಕೈಗಾರಿಕಾ ವಿಭಾಗ (ಖಾಗ್ರಾ), ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಹಾಸನ ಹಾಲು ಒಕ್ಕೂಟ, ಹಾಪ್‌ಕಾಮ್ಸ್, ನ್ಯೂ ಫ್ರೀಮ್ಯಾನ್ಸ್ ರೆಸ್ಟೋರೆಂಟ್, ಕೃಷಿ ಇಲಾಖೆ, ಬಿಗ್‌ಕಪ್, ಲೆವಿಸ್ಟಾ ಇನ್‌ಸ್ಟಾಂಟ್ ಕಾಫಿ, ಟಾಟಾ ಕಾಫಿ ಲಿಮಿಟೆಡ್, ಶರ್ಮಾ ಕಾಫಿ, ಬಯೋಟಾ ಕೊಡಗು, ಕಾಫಿ ಡಿಸ್ಟಿçಕ್ಟ್, ಐನ್‌ಮನೆ, ಕೇಂದ್ರಿಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಸೇರಿದಂತೆ ಮತ್ತಿತರ ಮಳಿಗೆಗಳನ್ನು ತೆರೆಯಲಾಗಿದೆ . ಕಾಫಿ ದಸರಾ ತಾ. ೭ ರಂದು (ಇಂದು) ಕೂಡ ಮುಂದುವರೆಯಲಿದೆ.