ಕಣಿವೆ, ಅ. ೬: ಸ್ವಾತಂತ್ರö್ಯ ನಂತರದ ಏಳು ದಶಕಗಳಿಂದಲೂ ಅರಣ್ಯವಾಸಿ ಗಿರಿಜನರ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನ್ಯಾಯಯುತವಾಗಿ ದೊರಕಬೇಕಾದ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿರುವ ಕಾರಣ ಜಿಲ್ಲೆಯ ಗಿರಿಜನ ನಿವಾಸಿಗಳು ಒಗ್ಗೂಡಿ ಬೃಹತ್ ಹೋರಾಟ ರೂಪಿಸುವ ಮೂಲಕ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ಗಿರಿಜನ ಮುಖಂಡರಾದ ಮಾವಿನಹಳ್ಳ ಕಾಳಿಂಗ ಹಾಗೂ ಜಿ.ಪಂ. ಮಾಜಿ ಸದಸ್ಯ ಆರ್.ಕೆ. ಚಂದ್ರು ಕರೆ ನೀಡಿದರು.

ಹೊಸಪಟ್ಟಣ ಸಮುದಾಯ ಭವನದಲ್ಲಿ ಜಿಲ್ಲೆಯ ವಿವಿಧ ಗಿರಿಜನ ನಿವಾಸಿಗಳ ಉಪಸ್ಥಿತಿಯಲ್ಲಿ ನಡೆದ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪದವಿ ಹಾಗೂ ಉನ್ನತ ಶಿಕ್ಷಣ ವ್ಯಾಸಂಗ ಗೈದ ಗಿರಿಜನರ ಮಕ್ಕಳಿಗೆ ಸರ್ಕಾರಗಳು ಸರ್ಕಾರಿ ಹುದ್ದೆ ನೀಡಿಲ್ಲ.

ಕಸ್ತೂರಿ ರಂಗನ್ ವರದಿ ಜಾರಿ ಹೆಸರಲ್ಲಿ ಗಿರಿಜನರನ್ನು ಒಕ್ಕೆಲೆಬ್ಬಿಸುವ ಹುನ್ನಾರ ನಿಲ್ಲಬೇಕು. ಅರಣ್ಯ ಹಕ್ಕುಗಳನ್ನು ಪಡೆಯುವಲ್ಲಿ ಅರಣ್ಯಾಧಿಕಾರಿಗಳು ನಿರಂತರವಾಗಿ ಗಿರಿಜನರ ಮೇಲೆ ಮಾಡುತ್ತಿರುವ ಶೋಷಣೆ ನಿಲ್ಲಬೇಕು. ಈಗಾಗಲೇ ರಚಿಸಿರುವ ಅರಣ್ಯ ಹಕ್ಕು ಸಮಿತಿಗಳು ನಿಷ್ಪçಯೋಜಕವಾಗಿವೆ.

ಅರಣ್ಯ ಸಮಿತಿ ಸಭೆಗಳನ್ನು ಆಯಾಯ ಹಾಡಿಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಸರ್ಕಾರಗಳನ್ನು ಬಡಿದೆಬ್ಬಿಸಲು ಉಗ್ರ ಸ್ವರೂಪದ ಹೋರಾಟವನ್ನು ರೂಪಿಸುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆಗಳು ಏರ್ಪಟ್ಟವು.

ಪಿರಿಯಾಪಟ್ಟಣದಲ್ಲಿ ಇದ್ದಂತಹ ರಾಜ್ಯ ಮಟ್ಟದ ಜೇನು ಕುರುಬ ಗಿರಿಜನರ ಕಚೇರಿ ಮಾದರಿಯಲ್ಲಿ ಕೊಡಗು ಜಿಲ್ಲೆಯ ಜೇನು ಕುರುಬರು ಹಾಗೂ ಆದಿವಾಸಿಗಳ ಕಚೇರಿಯನ್ನು ಕುಶಾಲನಗರದಲ್ಲಿ ತೆರೆಯಬೇಕು. ಸರ್ಕಾರದಿಂದ ಗಿರಿಜನರಿಗೆ ಯೋಜಿಸುವ ಯೋಜನೆಗಳು ನೇರವಾಗಿ ಗಿರಿಜನ ಹಾಡಿಗಳಿಗೆ ತಲುಪಬೇಕು.

ಇವತ್ತಿಗೂ ಕೂಡ ಸಮಾಜ ಕಲ್ಯಾಣ ಹಾಗೂ ಗಿರಿಜನ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಗಿರಿಜನರನ್ನು ಅವರ ಗುಲಾಮರಾಗಿಯೇ ಕಾಣುವಂತಹ ಸ್ಥಿತಿ ಇದೆ ಎಂಬುದಕ್ಕೆ ಅವರ ಬೇಜವಾಬ್ದಾರಿಯ ವರ್ತನೆಗಳೇ ಕಾರಣವಾಗಿವೆ ಎಂದು ಗಿರಿಜನ ಮುಖಂಡರೂ ಆದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಕೆ.ಚಂದ್ರು ಸಭೆಯಲ್ಲಿ ಆಕ್ರೋಶ ಹೊರಹಾಕಿದರು.

ಪಲಾನುಭವಿ ಗಿರಿಜನರಿಗೆ ಹಕ್ಕುಪತ್ರಗಳು ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನು ಸರ್ಕಾರ ಕೂಡಲೇ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಜೇನು ಕುರುಬರ ಅಭಿವೃದ್ದಿ ಸಂಘದ ಜಿಲ್ಲಾ ಉಸ್ತುವಾರಿ ಮಾವಿನಹಳ್ಳದ ಕಾಳಿಂಗ ಆಗ್ರಹಿಸಿದರು.

ಕಾಡಿನೊಳಗೆ ಹಾಗೂ ಕಾಡಂಚಿನಲ್ಲಿ ವಾಸಿಸುತ್ತಿರುವ ಅಮಾಯಕ ಗಿರಿಜನರಿಗೆ ಸಿಗಬೇಕಾದ ಅನೇಕ ಸೌಲಭ್ಯಗಳು ಉಳ್ಳವರ ಪಾಲಾಗುತ್ತಿವೆ ಎಂದರು ದೂರಿದರು.

ಸಭೆಯಲ್ಲಿ ಮೀನುಕೊಲ್ಲಿ ಗಿರಿಜನ ಹಾಡಿಯ ತಮ್ಮಯ್ಯ, ಸಜ್ಜಳ್ಳಿ ಹಾಡಿಯ ವಿಶ್ವ, ಯಡವನಾಡು, ನಂಜಣ್ಣ, ರವಿ, ಬಾಳೆಗುಂಡಿಯ ಸರಸ್ವತಿ, ತ್ಯಾಗತ್ತೂರಿನ ಭಾಗೀರಥಿ, ಮಾವಿನಹಳ್ಳದ ಜೆ.ಆರ್. ಗೋಪಾಲ, ಪಾಪಣ್ಣ ಸೇರಿದಂತೆ ೨೦೦ ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು.

ವರದಿ : ಕೆ.ಎಸ್.ಮೂರ್ತಿ