ವೀರಾಜಪೇಟೆ, ಅ. ೬: ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಘಟಕದ ವತಿಯಿಂದ ವೀರಾಜಪೇಟೆಯಲ್ಲಿರುವ ಸಮಾಜದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಾ. ೧೩ ರಂದು ಲಿಂಗಾಯಿತ ಕ್ರಿಕೆಟ್ ಕಪ್ ಕ್ರೀಡಾಕೂಟವನ್ನು ಮಾಯಮುಡಿ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಸಮಾಜದ ಗೌರವ ಅಧ್ಯಕ್ಷರಾದ ಅರಮೇರಿ ಕಳಂಚೇರಿ ಮಠದ ಶ್ರೀ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಭಾಗವಹಿಸಿ ಮಾತನಾಡಿ, ಕ್ರೀಡಾಕೂಟವು ಸಮಾಜ ಬಾಂಧವರನ್ನು ಪರಸ್ಪರ ಒಗ್ಗೂಡಿಸಲು ಹಾಗೂ ಯುವ ಜನಾಂಗಕ್ಕೆ ಕ್ರೀಡೆಯಲ್ಲಿ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಘಟಕದ ಅಧ್ಯಕ್ಷ ಎನ್.ಎಂ. ರಾಜೇಶ್ ಮಾತನಾಡಿ, ಕ್ರೀಡಾಕೂಟದಲ್ಲಿ ಅಖಿಲ ಭಾರತ ವೀರಶೈವ ರಾಜ್ಯ ಸಮಿತಿ ಮುಖಂಡರುಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿ ಗೊಳಿಸುವಂತೆ ಕರೆ ನೀಡಿದರು.

ಈ ಸಂದರ್ಭ ಸಮಾಜದ ಉಪಾಧ್ಯಕ್ಷ ರಘು ಶ್ರೀಕಂಠಪ್ಪ, ಕಾರ್ಯದರ್ಶಿ ವೇದ ಜಯರಾಜ್, ಖಜಾಂಚಿ ಬಿ.ಎಸ್. ಲೋಕೇಶ್, ನಿರ್ದೇಶಕರುಗಳಾದ ಎಸ್.ಎಲ್. ಮಹದೇವಪ್ಪ, ಎಸ್.ಎಂ. ವಿನಯ್, ಎಸ್.ಎನ್. ಮಹೇಶ್, ನಾಗಮ್ಮ, ರಾಜಶೇಖರ್, ಅಶ್ವಿನ್ ಕುಮಾರ್ ಉಪಸ್ಥಿತರಿದ್ದರು.