ಚೆಯ್ಯಂಡಾಣೆ, ಅ. ೬: ಯಾವುದೇ ಸಂದರ್ಭದಲ್ಲೂ ಶಿಕ್ಷಣದಿಂದ ವಂಚಿತರಾಗಬಾರದು, ಶಿಕ್ಷಣದ ಮೂಲಕವೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.
ವೀರಾಜಪೇಟೆಯ ಪೆರುಂಬಾಡಿಯ ಶಂಸುಲ್ ಉಲಮಾ ಎಜುಕೇಶನಲ್ ಅಕಾಡೆಮಿ ಟ್ರಸ್ಟ್ ವತಿಯಿಂದ ಶಂಸುಲ್ ಉಲಮಾ ಕ್ಯಾಂಪಸ್‌ನಲ್ಲಿ ಆಯೋಜಿಸಿದ ಅನಾಥಾಶ್ರಮದ ನಾಲ್ಕು ಹೆಣ್ಣು ಮಕ್ಕಳ ವಿವಾಹ ಸಮಾರಂಭ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಹಲವಾರು ಯೋಜನೆಗಳನ್ನು ನೀಡಿದ್ದು ಇದರ ಸದುಪಯೋಗಪಡಿಸಿಕೊಂಡು ಉನ್ನತ ಮಟ್ಟದ ಶಿಕ್ಷಣದೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಹೇಳಿದ ಅವರು ಶಂಸುಲ್ ಉಲಮ ಎಜುಕೇಶನಲ್ ಅಕಾಡೆಮಿ ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ನಿರ್ಗತಿಕ ಬಡ ಹೆಣ್ಣು ಮಕ್ಕಳ ಭವಿಷ್ಯ ರೂಪಿಸಲು ಉನ್ನತ ಶಿಕ್ಷಣದೊಂದಿಗೆ ಉದ್ಯೋಗ ಕಲ್ಪಿಸಿ ವಿವಾಹ ಕಾರ್ಯ ಮಾಡುತ್ತಿರುವುದು ಮಾದರಿಯಾಗಿದೆ ಎಂದರು.
ನೂರಕ್ಕೂ ಹೆಚ್ಚು ಬಡ ಹೆಣ್ಣು ಮಕ್ಕಳನ್ನು ಉಚಿತ ವಸತಿ ಸೌಲಭ್ಯ ದೊಂದಿಗೆ ಉನ್ನತ ಶಿಕ್ಷಣ ಕಲಿಕೆಗೂ ಸಹಕಾರ ನೀಡಿ ಉತ್ತಮ ಭವಿಷ್ಯ ರೂಪಿಸುತ್ತಿರುವುದು ಶ್ಲಾಘನೀಯ. ಎಲ್ಲಾ ವರ್ಗದ ಬಾಂಧವರು ತಮ್ಮ ಮಕ್ಕಳ ಭವಿಷ್ಯ ರೂಪಿಸಲು ಶಿಕ್ಷಣ ಕಲಿಕೆಗೆ ಪ್ರೋತ್ಸಾಹ ನೀಡಿದ್ದಲ್ಲಿ ಪ್ರತಿಭಾನ್ವಿತರಾಗಿ ಉನ್ನತ ಹುದ್ದೆಯೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.ವೀರಾಜಪೇಟೆ ಸಮೀಪದ ಪೆರುಂಬಾಡಿ ಶಂಸುಲ್ ಉಲಮ ಕ್ಯಾಂಪಸ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧಾರ್ಮಿಕ ನೇತಾರರು ಪಾಣಕ್ಕಾಡ್ ಬಶೀರ್ ಅಲಿ ಶಿಹಾಬ್ ತಂಙಳ್ ನಿಖಾ ನೇತೃತ್ವ ವಹಿಸಿದ್ದರು. ಪ್ರಖ್ಯಾತ ವಾಗ್ಮಿ ಸಿರಾಜುದ್ದೀನ್ ಅಲ್ ಖಾಸಿಮಿ ಧಾರ್ಮಿಕ ಪ್ರವಚನ ನೀಡಿದರು.
ಶಂಸುಲ್ ಉಲಮ ಎಜುಕೇಶನಲ್ ಟ್ರಸ್ಟ್ ಅಕಾಡೆಮಿ ಅಧ್ಯಕ್ಷ ಸಿಪಿಎಂ ಬಶೀರ್ ಹಾಜಿ ಮಾತನಾಡಿ, ಶಂಶುಲ್ ಉಲಮ ಟ್ರಸ್ಟ್ ಮೂಲಕ ೪೦ ಬಡ ಅನಾಥ, ನಿರ್ಗತಿಕ, ಹೆಣ್ಣು ಮಕ್ಕಳ ವಿವಾಹ ಕಾರ್ಯ ಮಾಡಲಾಗಿದ್ದು,ಶಿಕ್ಷಣ, ಉದ್ಯೋಗ ಹಾಗೂ ಸುಖ ಜೀವನ ದೊಂದಿಗೆ ಬದುಕು ಸಾಗಿಸುತ್ತಿದ್ದಾರೆ.
ಅನಾಥಾಶ್ರಮದಲ್ಲಿ ನಿರ್ಗತಿಕ ಹೆಣ್ಣು ಮಕ್ಕಳಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ಉನ್ನತ ಶಿಕ್ಷಣಕ್ಕೂ ಸಹಕಾರ ನೀಡಲಾಗುತ್ತಿದೆ.
ದಾನಿಗಳು ಹೆಣ್ಣು ಮಕ್ಕಳ ಭವಿಷ್ಯ ರೂಪಿಸಲು ಸಹಕಾರ ನೀಡುತ್ತಿದ್ದಾರೆ ಎಂದರು. ನಾಲ್ಕು ಹೆಣ್ಣುಮಕ್ಕಳ ವಿವಾಹ ಕಾರ್ಯದಲ್ಲಿ ಧಾರ್ಮಿಕ ಪಂಡಿತರುಗಳು, ಉಲಮಾ, ಉಮರಾ ನೇತಾರರು, ದಾನಿಗಳು, ಸಮಾಜ ಸೇವಕರು,ಜನ ಪ್ರತಿನಿಧಿಗಳು ಪಾಲ್ಗೊಂಡು ವಧು ವರರಿಗೆ ಶುಭ ಕೋರಿದರು.
ಸಮಸ್ತ ಕೇಂದ್ರ ಮುಶಾವರ ಸದಸ್ಯರು ಹಾಗೂ ಕೊಡಗು ಜಿಲ್ಲಾ ಉಪ ಖಾಝಿ ಎಂ.ಎA. ಅಬ್ದುಲ್ಲಾ ಫೈಝಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿ ಮಾತ ನಾಡಿದರು. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಹನಿಫ್, ಕೆಎಂಎ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಸೂಫಿ ಹಾಜಿ, ಪಟ್ಟಣ ಪಂಚಾಯಿತಿ ಸದಸ್ಯ ಮೊಹಮ್ಮದ್ ರಾಫಿ, ಬಷಿರ್, ಯಾಕುಬ್, ಅಬ್ದುಲ್ ಸಲಾಂ, ಕುಂಜಿಲ ಮುದರಿಸ್ ನಿಝಾರ್ ಅಹ್ಸನಿ, ಶಹಜಹಾನ್ ಸಖಾಫಿ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಮನ್ಸೂರ್ ಅಲಿ, ಅಬ್ದುಲ್ ರೆಹಮಾನ್, ಪ್ರಮುಖರಾದ ಮುಸ್ತಫಾ ಹಾಜಿ, ಅಬ್ದುಲ್ ಗಫೂರ್, ಸಿದ್ದೀಕ್, ಉಮ್ಮರ್ ಪೈಝಿ, ಹಕೀಂ, ಮುಸ್ತಫ ಮಹಮ್ಮದ್ ಅಲಿ, ಹಂಸ ಹಾಜಿ, ಅಶ್ರಫ್, ಸಲೀಂ ಹಾಜಿ, ಬಷಿರ್ ಎಡಪಾಲ, ಎ.ಕೆ. ಹಕೀಂ, ಮಣಿ ಮಾಸ್ಟರ್ ಸೇರಿದಂತೆ ಮತ್ತಿತರರು ಹಾಜರಿದ್ದರು.