ಮಡಿಕೇರಿ, ಅ. ೬: ಜಿಲ್ಲೆಯಾದ್ಯಂತ ಸ್ವಚ್ಛತೆಯೇ ಸೇವೆ (ಸ್ವಚ್ಛತಾ ಹೀ ಸೇವಾ) ಪಾಕ್ಷಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಕೊಡಗು ಜಿಲ್ಲಾ ಪಂಚಾಯತ್ನ ಉಪಕಾರ್ಯದರ್ಶಿ ಜಿ. ಧನರಾಜು ಅವರು ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಶಂಸನಾ ಪತ್ರ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆಯಂತೆ ಸ್ವಚ್ಛತೆಯೇ ಸೇವೆ ಪಾಕ್ಷಿಕ ಅಭಿಯಾನವನ್ನು ಸೆಪ್ಟೆಂಬರ್ ೧೭ ರಿಂದ ಅಕ್ಟೋಬರ್ ೨ ರ ವರೆಗೆ ಜಿಲ್ಲೆಯ ೧೦೨ ಗ್ರಾಮ ಪಂಚಾಯಿತಿ ಗಳಲ್ಲಿಯೂ ಉತ್ತಮ ಮತ್ತು ವಿಭಿನ್ನವಾಗಿ ಹಮ್ಮಿಕೊಳ್ಳಲಾಗಿದೆ ಎಂದರು. ಅಭಿಯಾನದ ಭಾಗವಾಗಿ ಶ್ರಮದಾನ, ಶಾಲಾ ಮಕ್ಕಳಿಗೆ ರಸಪ್ರಶ್ನೆ, ಚಿತ್ರಕಲಾ ಸ್ಪರ್ಧೆ, ಮಹಿಳಾ ಸಂಘದ ಸದಸ್ಯರಿಗೆ ರಂಗೋಲಿ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ೧೫ ದಿನಗಳ ಕಾಲ ಹಮ್ಮಿಕೊಂಡು ಸ್ವಚ್ಛತೆಯ ಸಂದೇಶವನ್ನು ಸಾರಲಾಗಿದೆ. ಸೆಪ್ಟೆಂಬರ್ ೨೭ ರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛತಾ ಆಂದೋಲನ ಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ೧೦೨ ಗ್ರಾ.ಪಂ.ಗಳ ಪೈಕಿ ೫ ತಾಲೂಕಿನಿಂದ ಅತ್ಯುತ್ತಮ ವಾಗಿ ಕಾರ್ಯಕ್ರಮ ಆಯೋಜನೆ ಮಾಡಿರುವ ೧೨ ಗ್ರಾ.ಪಂ.ಗಳಿಗೆ ಪ್ರಶಂಸನಾ ಪತ್ರವನ್ನು ನೀಡುತ್ತಿರುವುದು ಸಂತಸದ ವಿಷಯ. ಮುಂದಿನ ದಿನಗಳಲ್ಲಿಯೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಸುಂದರ ಪರಿಸರವನ್ನು ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್ ಅವರು, ಸ್ವಚ್ಛ ಭಾರತ್ ಮಿಷನ್ (ಗ್ರಾ.) ಯೋಜನೆಯಡಿಯಲ್ಲಿ ಉತ್ತಮ ಪಾಕ್ಷಿಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಯಾವುದೇ ಯೋಜನೆಯ ಯಶಸ್ವಿಗೆ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳು ಅತೀ ಅವಶ್ಯಕ. ಗ್ರಾಮ ಪಂಚಾಯಿತಿಗಳು ವಿಶಿಷ್ಟವಾಗಿ ಕಾರ್ಯಕ್ರಮ ಹಮ್ಮಿಕೊಂಡು ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಸ್ವಚ್ಛತೆ ಎಂಬುದೂ ಸಹ ಸೇವೆ ಎಂಬುದನ್ನು ತಿಳಿಸಿವೆ ಎಂದರು.
ಸ್ವಚ್ಛತೆಯೇ ಸೇವೆ ಅಭಿಯಾನದ ಅನುಷ್ಟಾನ ಸಂಬAಧಿಸಿದAತೆ ೭ನೇ ಹೊಸಕೋಟೆ, ದೇವರಪುರ, ಕೂಡುಮಂಗಳೂರು, ನಾಪೋಕ್ಲು ಮತ್ತು ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷರು ಅಭಿಪ್ರಾಯ ಹಂಚಿ ಕೊಂಡರು. ಬಳಿಕ ಜಿಲ್ಲೆಯಾದ್ಯಂತ ಸ್ವಚ್ಛತೆಯೇ ಸೇವೆ ಅಭಿಯಾನವನ್ನು ಗ್ರಾ.ಪಂ. ಮಟ್ಟದಲ್ಲಿ ವಿಭಿನ್ನವಾಗಿ ಅನುಷ್ಟಾನಿಸಿದ ೧೨ ಗ್ರಾ.ಪಂ.ಗಳಾದ ನಾಪೋಕ್ಲು, ಹಾಕತ್ತೂರು, ಗಾಳಿಬೀಡು, ಗುಡ್ಡೆಹೊಸೂರು, ೭ನೇ ಹೊಸಕೋಟೆ, ದುಂಡಳ್ಳಿ, ಹಾನಗಲ್ಲು, ಶ್ರೀಮಂಗಲ, ಅಮ್ಮತ್ತಿ ಮತ್ತು ದೇವರಪುರ ಗ್ರಾ.ಪಂ.ಗಳ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸನ್ಮಾನಿಸಿ, ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಸುರೇಶ್ ಕುಮಾರ್, ಜಿ.ಪಂ. ಸಹಾಯಕ ಕಾರ್ಯದರ್ಶಿ ಅಬ್ದುಲ್ ನಬಿ, ಸಹಾಯಕ ಯೋಜನಾಧಿಕಾರಿ ಜೀವನ್ ಕುಮಾರ್, ಸೋಮವಾರಪೇಟೆ ತಾ.ಪಂ. ಸಹಾಯಕ ನಿರ್ದೇಶಕರಾದ ಶ್ರೀನಿವಾಸ್, ಸ್ವಚ್ಛ ಭಾರತ್ ಮಿಷನ್ ಯೋಜನೆಯ ಜಿಲ್ಲಾ ಸಮಾಲೋಚಕರಾದ ಪೆಮ್ಮಯ್ಯ, ವಾಸುದೇವ್, ಹರ್ಷಿತ, ಭವ್ಯ ಇತರರು ಇದ್ದರು.