ಸಿದ್ದಾಪುರ, ಅ. ೭: ಅಕ್ರಮವಾಗಿ ಬೀಟೆ ಮರದ ನಾಟಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬೇಧಿಸಿದ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ವಾಹನ ಸಹಿತ ಮರಗಳ ನಾಟಗಳನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಶಾಲನಗರದ ಮೀನುಕೊಲ್ಲಿ ಅರಣ್ಯ ವ್ಯಾಪ್ತಿಗೆ ಒಳಪಡುವ ವಾಲ್ನೂರು - ತ್ಯಾಗತ್ತೂರು ಗ್ರಾಮದ ನಿವಾಸಿ ಚಂಗಪ್ಪ ಎಂಬವರ ಕಾಫಿ ತೋಟದೊಳಗಿನಿಂದ ಅಕ್ರಮವಾಗಿ ಬೀಟೆ ಮರಗಳನ್ನು ಕಡಿದು ನಾಟಗಳನ್ನು ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿರುವ ಖಚಿತ ಸುಳಿವಿನ ಮೇರೆಗೆ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಕಳ್ಳತನ ಮಾಡಿರುವ ಮರದ ನಾಟಗಳನ್ನು ಸಾಗಾಟ ಮಾಡಿದ ವಾಹನ ಮೇಲ್ಭಾಗದಲ್ಲಿ ಕೋಳಿ ಫೀಡ್ (ಕೋಳಿ ಆಹಾರ)ದ ಚೀಲಗಳನ್ನು ನಾಟಗಳ ಮೇಲ್ಭಾಗದಲ್ಲಿ ಇಟ್ಟು ವ್ಯವಸ್ಥಿತವಾಗಿ ಸಂಚು ರೂಪಿಸಿ ಸಾಗಾಟಕ್ಕೆ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳ ಮಿಂಚಿನ ಕಾರ್ಯಾಚರಣೆ ನಡೆಸಿ ಮರ ಸಾಗಾಟಕ್ಕೆ ಬಳಸಿದ ವಾಹನ (ಕೆಎ ೫೨-ಎ ೧೪೪೧) ಹಾಗೂ ಆರೋಪಿಯಾಗಿರುವ ತ್ಯಾಗತ್ತೂರು ಗ್ರಾಮದ ನಿವಾಸಿ ಸಿದ್ದೀಕ್ ಎಂಬಾತನನ್ನು ಬಂಧಿಸಿದ್ದಾರೆ. ಇತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಮರಗಳ ಹಾಗೂ ವಾಹನದ ಒಟ್ಟು ಮೌಲ್ಯ ರೂ. ೨೦ ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಹಾಗೂ ಎ.ಸಿ.ಎಫ್. ಎ.ಎ. ಗೋಪಾಲ್ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಸುಬ್ರಾಯ, ರವಿಯತ್ನಲ್, ದೇವಯ್ಯ, ವೆಂಕಟೇಶ್, ಸಿಬ್ಬಂದಿಗಳಾದ ರವಿ, ಸಿದ್ದರಾಮಯ್ಯ, ಸುನಿಲ್ ಕುಮಾರ್, ಚಾಲಕ ವಾಸು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. -ವಾಸು.