ಗೋಣಿಕೊಪ್ಪಲು, ಅ. ೭: ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ಪ್ರತಿ ವರ್ಷ ದಸರಾ ಜನೋತ್ಸವದ ಅಂಗವಾಗಿ ಕ್ರೀಡಾಕೂಟ ವನ್ನು ಆಯೋಜಿಸ ಲಾಗುತ್ತಿದೆ. ಆ ಮೂಲಕ ಸ್ಥಳೀಯರಿಗೆ ಅವಕಾಶ ನೀಡುತ್ತಿದ್ದೇವೆ. ಇದರ ಪ್ರಯೋಜನ ಊರಿನ ಜನರು ಸದ್ಬಳಕೆ ಮಾಡಿ ಕೊಳ್ಳುವಂತೆ ಕೈಕೇರಿ ಭಗವತಿ ಯುವ ದಸರಾ ಸಮಿತಿಯ ಅಧ್ಯಕ್ಷ ಜಮ್ಮಡ ಅರಸು ಅಪ್ಪಣ್ಣ ಕರೆ ನೀಡಿದರು.
ಸಮೀಪದ ಕೈಕೇರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕೈಕೇರಿ ಭಗವತಿ ಯುವ ದಸರಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೯ನೇ ವರ್ಷದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವು ದಸರಾ ಆಚರಣೆಯ ಅಂಗವಾಗಿ ಪುರುಷ, ಮಹಿಳೆ ಹಾಗೂ ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗ್ರಾಮದ ಹಿರಿಯರಾದ ಜಮ್ಮಡ ಮೋಹನ್, ಸಮಿತಿಯ ಉಪಾಧ್ಯಕ್ಷ ಪಡಿಕಲ್ ಯದು ಸೇರಿದಂತೆ ಇನ್ನಿತರ ಪ್ರಮುಖರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕ್ರೀಡಾಕೂಟದ ಅಂಗವಾಗಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಹಗ್ಗಜಗ್ಗಾಟ, ಬಾರದ ಗುಂಡು ಎಸೆತ, ಮ್ಯೂಸಿಕಲ್ ಚೇರ್, ಆಟೋಟ ಸ್ಪರ್ಧೆ ಹಾಗೂ ಪಾಸಿಂಗ್ ದಿ ಬಾಲ್, ಮಕ್ಕಳಿಗಾಗಿ ಆಯೋಜಿಸಲಾಗಿತ್ತು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ನಗದು ಬಹುಮಾನದೊಂದಿಗೆ ಪಾರಿತೋಷಕ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೈಕೇರಿ ಭಗವತಿ ಯುವ ದಸರಾ ಸಮಿತಿಯ ಗೌರವ ಅಧ್ಯಕ್ಷ ಕುಪ್ಪಂಡ ಗಿರಿ ಪೂವಣ್ಣ, ಪದಾಧಿಕಾರಿಗಳಾದ ಕೊಕ್ಕಂಡ ಧರ್ಮಜ ಉತ್ತಪ್ಪ, ಎಸ್. ಸುಂದರ, ಎಂ.ಎಸ್. ಪ್ರವೀಣ್, ಎಂ.ಎಸ್. ಪ್ರಸಾದ್, ಎಂ.ಇ. ಧರ್ಮೇಂದ್ರ, ಎ.ಪಿ. ಸುರೇಶ್, ಜಮ್ಮಡ ಹೇಮ ನಾಣಯ್ಯ, ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಎ. ಮುತ್ತುರಾಜ್ ಸ್ವಾಗತಿಸಿ, ಖಜಾಂಚಿ ಚಿಯಕ್ಪೂವಂಡ ಸುಬ್ರಮಣಿ ವಂದಿಸಿದರು.