ಮಡಿಕೇರಿಯ ಐತಿಹಾಸಿಕ ದಸರಾ ಕವಿಗೋಷ್ಠಿಗೆ ತನ್ನದೇ ಆದ ಇತಿಹಾಸವಿದೆ. ಕಳೆದ ಅವಧಿಯ ಕವಿಗೋಷ್ಠಿಯು ಕವಿಗೋಷ್ಠಿ ಸಮಿತಿ ಅಧ್ಯಕ್ಷ ಪತ್ರಕರ್ತ ಉಜ್ವಲ್ ರಂಜಿತ್ ಅವರ ಸಾರಥ್ಯದಲ್ಲಿ, ಹಿರಿಯ ಕವಯತ್ರಿ ಡಾ. ಕೋರನ ಸರಸ್ವತಿ ಅವರ ಅಧ್ಯಕ್ಷತೆಯಲ್ಲಿ ಜನಮನ ಸೆಳೆದಿತ್ತು. ಅದಕ್ಕೆ ಮುಖ್ಯ ಕಾರಣ ಅನ್ನಿಸಿದ್ದು ಕವಿಗೋಷ್ಠಿಯ ಮುಖ್ಯ ಅತಿಥಿ ಚಂದನವನದ ಯುವ ಸಾಹಿತಿ ಪ್ರಮೋದ್ ಮರವಂತೆ ಅವರ ಉಪಸ್ಥಿತಿ.

ಈ ಬಾರಿಯೂ ಮಡಿಕೇರಿ ದಸರಾ ಕವಿಗೋಷ್ಠಿ ಉಜ್ವಲ್ ರಂಜಿತ್ ಹಾಗೂ ಸಂಗಡಿಗರ ಸಾರಥ್ಯದಲ್ಲಿಯೇ ನಡೆಯುತ್ತಿದ್ದು. ಕವಿಗೋಷ್ಠಿಯು ಹಿರಿಯ ಲೇಖಕಿ, ಕವಯತ್ರಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ ೯ರಂದು ನಡೆಯಲಿದೆ.

ಈ ಬಾರಿ ಕವಿಗೋಷ್ಠಿಯ ವಿಶೇಷ ಅತಿಥಿಯಾಗಿ ಕನ್ನಡ ಸಿನಿಮಾ ಲೋಕದ ಜನಪ್ರಿಯ ಸಂಗೀತ ನಿರ್ದೇಶಕ ಚರಣ್ ರಾಜ್ ಅವರು ಭಾಗವಹಿಸುತ್ತಿದ್ದಾರೆ.

ಮೂಲತಃ ಕೊಡಗಿನ, ವೀರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆಯ ಹೊಸಬಡಾವಣೆ ನಿವಾಸಿ ಚರಣ್ ರಾಜ್ ಎಂ.ಆರ್. ಅವರು ವಿಜಯ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿರುವ ಎಂ.ಎಸ್. ರವಿ ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎಸ್.ಆರ್. ಉಷಾಲತಾ ಅವರ ಪುತ್ರ. ೧೯೮೫ರಲ್ಲಿ ಜನಿಸಿದ ಚರಣ್ ರಾಜ್, ತಮ್ಮ ಪ್ರೌಢ ಶಿಕ್ಷಣವನ್ನು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಮಾಡಿ, ಪ್ರಾಥಮಿಕ ಹಾಗೂ ಪದವಿಪೂರ್ವ ಶಿಕ್ಷಣವನ್ನು ವೀರಾಜಪೇಟೆಯ ಸೇಂಟ್ ಆನ್ಸ್ ಕಾಲೇಜಿನಲ್ಲಿ ಮುಗಿಸುತ್ತಾರೆ. ಹಾಸನದ ಮಲ್ನಾಡ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿAಗ್ ಪದವಿ ಪಡೆದಿರುವ ಚರಣ್ ರಾಜ್ ಬಾಲ್ಯದಿಂದಲೂ ಸಂಗೀತದ ಒಡನಾಡಿ. ಕರ್ನಾಟಕ ಸಂಗೀತದಲ್ಲಿ ಪರಿಣಿತರಾಗಿರುವ ಇವರು ನಿರ್ಮಲ ನಾಚಪ್ಪ, ವಿದುಷಿ ಲೀಲಾ ತಾರಾನಾಥ್ ಹಾಗೂ ಪೆರಂಬುವರ್ ಜಿ ರವೀಂದ್ರನಾಥ್ ಅವರ ಶಿಷ್ಯ.

ವೆಸ್ಟರ್ನ್ ಕ್ಲಾಸಿಕಲ್ ಸಂಗೀತದ ಅಭ್ಯಾಸವನ್ನು ಪ್ರತಿಷ್ಠಿತ ಲಂಡನ್ ಕಾಲೇಜ್ ಆಫ್ ಮ್ಯೂಸಿಕ್ ಸಂಸ್ಥೆಯಲ್ಲಿ ಮಾಡಿರುವ ಹೆಗ್ಗಳಿಕೆ ಚರಣ್ ರಾಜ್ ಅವರದ್ದು. ಇದೀಗ ತಮ್ಮ ವಿಭಿನ್ನ ಶೈಲಿಯ ಸಂಗೀತ ನಿರ್ದೇಶನದಿಂದ ಕನ್ನಡ ಸಿನಿಮಾ ಲೋಕದಲ್ಲಿ ಗಮನಸೆಳೆಯುತ್ತಿರುವ ಚರಣ್ ರಾಜ್ ಅವರಿಗೆ ಸಂಗೀತದ ಮೇಲಿದ್ದ ಒಲವು ಇಂಜಿನಿಯರ್ ಆಗಬೇಕಿದ್ದ ಇವರನ್ನು ದೇಶವೇ ತಿರುಗಿ ನೋಡುವಂತಹ ಸಂಗೀತ ನಿರ್ದೇಶಕನನ್ನಾಗಿ ಮಾಡಿದೆ.

ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡುವ ಮುನ್ನ ಸುಮಾರು ಇನ್ನೂರಕ್ಕೂ ಹೆಚ್ಚಿನ ಜಾಹೀರಾತು ಜಿಂಗಲ್ಸ್ ಕಂಪೋಸ್ ಮಾಡಿರುವ ಅನುಭವ ಇವರಿಗಿದೆ. ಪ್ರತಿಷ್ಠಿತ ಸ್ಟಾರ್ ಸ್ಪೋರ್ಟ್ಸ್, ಟೊಯೋಟಾ, ಫಾಸ್ಟ್ ಟ್ರಾಕ್, ನೈಕ್, ಕೋಕ್ ಬ್ರಾಂಡ್‌ಗಳಿಗೆ ಕೆಲಸ ಮಾಡಿರುವ ಹೆಗ್ಗಳಿಕೆಯೂ ಇವರದ್ದು.

ಮಲಯಾಳಂ ಆಲ್ಬಂ ತಾಳಮ್ ಇವರ ಸ್ವತಂತ್ರ ಆಲ್ಬಂ. ಇವರ 'ವಿಂಡ್ಸ್ ಆಫ್ ಸಮ್ಸಾರ' ಹಾಗೂ ' ಡಿವೈನ್ ಟೈಡ್ಸ್' ಆಲ್ಬಂ ಪ್ರತಿಷ್ಠಿತ ಗ್ರಾಮಿ ಪ್ರಶಸ್ತಿಗೂ ಭಾಜನವಾಗಿದೆ.

೨೦೧೪ ರಲ್ಲಿ ಸಿನಿಮಾ ಸಂಗೀತ ನಿರ್ದೇಶನಕ್ಕೆ 'ಹರಿವು' ಸಿನಿಮಾದ ಮೂಲಕ ಪದಾರ್ಪಣೆ ಮಾಡಿದ ಚರಣ್ ರಾಜ್ ಅವರು ಗೋದಿ ಬಣ್ಣ ಸಾಧಾರಣ ಮೈಕಟ್ಟು, ಮಂಡ್ಯ ಟೂ ಮುಂಬೈ, ದಳಪತಿ, ಜೀರ್ಜಿಂಬೆ, ಪುಷ್ಪಕ ವಿಮಾನ, ಟಗರು, ಕವಲುದಾರಿ, ಅವನೇ ಶ್ರೀಮನ್ ನಾರಾಯಣ, ಮೈಸೂರು ಡೈರಿಸ್, ಪಾಪ್ ಕಾರ್ನ್ ಮಂಕಿ ಟೈಗರ್, ಭೀಮಸೇನ ನಳ ಮಹರಾಜ, ಸಲಗ, ಜೇಮ್ಸ್, ಹೆಡ್ ಬುಷ್, ಸಪ್ತಸಾಗರದಾಚೆ ಎಲ್ಲೋ, ಬ್ಯಾಡ್ ಮ್ಯಾನರ್ಸ್ ಹಾಗೂ ಸೋಮು ಸೌಂಡ್ ಇಂಜಿನಿಯರ್ ಸಿನಿಮಾಗಳ ಮೂಲಕ ಈಗಾಗಲೇ ಕನ್ನಡಿಗರ ಜನಮಾನಸದಲ್ಲಿ ಭದ್ರ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಕನ್ನಡ ಹಾಡುಗಳಿಗೆ ವೆಸ್ಟರ್ನ್, ರ‍್ಯಾಪ್ ಟಚ್ ಕೊಟ್ಟು, ಜೊತೆಗೆ ಸಲಗ ಹಾಗೂ ಭೀಮ ಸಿನಿಮಾಗಳಲ್ಲಿ ಕರ್ನಾಟಕದ ಸಿದ್ದಿ ಜನಾಂಗ ಹಾಗೂ ಜೇನು ಕುರುಬ ಸಮುದಾಯಗಳ ಜನಪದ ಹಾಡುಗಳನ್ನು ಬಳಸುವ ಮೂಲಕ ಬುಡಕಟ್ಟು ಶೈಲಿಯನ್ನು ಸಿನಿಮಾ ಹಾಡಿಗೆ ಬಳಸಿರುವ ಹೆಗ್ಗಳಿಕೆಯೂ ಇವರ ಸಂಗೀತ ನಿರ್ದೇಶನಕ್ಕಿದೆ.

ಸಲಗಾ ಸಿನಿಮಾದ ಕಾ ಚಲಿಗೇ... ಹಾಡು ಹಾಗೂ ಭೀಮ ಸಿನಿಮಾದ ಲೇಲೇ ಅಮುಣಾ ಲೇಲೇ ಹಾಡೂ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ.

ಇಂತಹ ವಿಭಿನ್ನ ಶೈಲಿಯ ಸಂಗೀತ ನಿರ್ದೇಶನದಿಂದ ಗಮನಸೆಳೆಯುತ್ತಿರುವ ಚರಣ್ ರಾಜ್ ಅವರು ಈಗಾಗಲೇ ಮಲಯಾಳಂ, ತಮಿಳು, ತೆಲುಗು ಸೇರಿದಂತೆ ಇತರ ಭಾಷೆಯಗಳಲ್ಲೂ ಬಹು ಬೇಡಿಕೆಯಲ್ಲಿದ್ದಾರೆ.

ಇವರು ಸಂಗೀತ ನಿರ್ದೇಶನ ಮಾಡಿದ 'ಹರಿವು' ಸಿನಿಮಾಗೆ ರಾಷ್ಟç ಪ್ರಶಸ್ತಿ ಲಭಿಸಿದ್ದು, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಸಂಗೀತ ನಿರ್ದೇಶನಕ್ಕೆ ಪ್ರತಿಷ್ಠಿತ ಫಿಲ್ಮ್ ಫೇರ್ ಪ್ರಶಸ್ತಿ, ಜೇಮ್ಸ್ ಸಿನಿಮಾದ ಸಂಗೀತ ನಿರ್ದೇಶನಕ್ಕೆ ಚಿತ್ರ ಸಂತ ಪ್ರಶಸ್ತಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾಕ್ಕೆ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಹಾಗೂ ಟೈಮ್ಸ್ ಬಿಎಎಫ್ ಉತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ, ಜೀರ್ಜಿಂಬೆ ಸಿನಿಮಾಗೆ ಕರ್ನಾಟಕ ರಾಜ್ಯ ಸಿನಿಮಾ ಪ್ರಶಸ್ತಿ, ಸಲಗ ಸಿನಿಮಾ ಸಂಗೀತ ನಿರ್ದೇಶನಕ್ಕೆ ಚಂದನವನ ಫಿಲ್ಸ್ ಕ್ರಿಟಿಕ್ಸ್ ಪ್ರಶಸ್ತಿ ಲಭಿಸಿರುತ್ತದೆ. ಸೈಮಾ ಹಾಗೂ ಫಿಲ್ಮ್ ಫೇರ್ ಪ್ರಶಸ್ತಿಗಳಿಗೆ ಇವರ ಹಲವು ಸಿನಿಮಾಗಳು ನಾಮ ನಿರ್ದೇಶನಗೊಂಡಿವೆ.

ಪ್ರಸ್ತುತ ಮಡದಿ ಕೆ ಎಸ್ ಚೈತನ್ಯ ಹಾಗೂ ಅವಳಿ ಮಕ್ಕಳಾದ ಭಾರ್ಗವ್ ಹಾಗೂ ಭೈರವ್‌ನೊಂದಿಗೆ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಲ್ಲಿ ನೆಲೆಸಿರುವ ಚರಣ್ ರಾಜ್ ಅವರು ನಮ್ಮ ಮಡಿಕೇರಿ ದಸರಾ ಕವಿಗೋಷ್ಠಿಯ ವಿಶೇಷ ಅತಿಥಿಗಳಾಗಿ ಭಾಗವಹಿಸುತ್ತಿರುವುದು ಮಡಿಕೇರಿ ದಸರಾ ಉತ್ಸವದ ಮೆರುಗನ್ನು ಹೆಚ್ಚಿಸಿದೆ.

-ರಂಜಿತ್ ಕವಲಪಾರ