ವೀರಾಜಪೇಟೆ, ಅ. ೭: ನಗರದ ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡಿ ವರ್ಷದ ಎಲ್ಲಾ ದಿನಗಳು ಸೇವೆಯಲ್ಲಿ ತೊಡಗಿಸಿಕೊಂಡು ಜನಸೇವೆಗೆ ನೀಡುತ್ತಿರುವುದು ಗಮನಾರ್ಹ ವಾಗಿದೆ ಎಂದು ವೀರಾಜಪೇಟೆ ಪುರಸಭೆಯ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಪುರಸಭೆ ಪೌರಕಾರ್ಮಿಕ ಸೇವಾ ಸಮಿತಿ ವೀರಾಜಪೇಟೆ ವತಿಯಿಂದ ವೀರಾಜಪೇಟೆ ನಗರದ ಪುರಭವನ ದಲ್ಲಿ ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದ ಅಧÀ್ಯಕ್ಷತೆ ವಹಿಸಿ ಮಾತನಾಡಿದ ದೇಚಮ್ಮ, ಪೌರಕಾರ್ಮಿಕರು ಪುರಸಭೆಯ ಒಂದು ಅಂಗ, ಪುರಸಭೆಯ ಆಡಳಿತ ವರ್ಗ ಮತ್ತು ಪೌರಕಾರ್ಮಿಕರು ಒಂದು ನಾಣ್ಯದ ಎರಡು ಮುಖಗಳಂತೆ, ನಗರದ ಶುಚಿತ್ವಕ್ಕೆ ಮಹತ್ವ ನೀಡಿದಂತೆ ತಮ್ಮ ಆರೋಗ್ಯ ಮತ್ತು ಕುಟುಂ¨ದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತಾಗಬೇಕು. ಪೌರ ಕಾರ್ಮಿಕರ ಅಭಿವೃದ್ಧಿಗಾಗಿ ಸರ್ಕಾರದಿಂದ ಲಭಿಸುವ ಎಲ್ಲಾ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಪುರಸಭೆಯ ಮುಖ್ಯಾಧಿಕಾರಿ ಎ. ಚಂದ್ರಕುಮಾರ್ ಮಾತನಾಡಿ, ಪೌರಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅನುದಾನ ಮತ್ತು ಆರೋಗ್ಯ ವಿಮೆ ಹಾಗೂ ಇತರ ಸೌಲಭ್ಯಗಳನ್ನು ಪೌರಕಾರ್ಮಿಕರಿಗೆ ಒದಗಿಸಿಕೊಡುವಲ್ಲಿ ಪೂರಕವಾಗಿ ಸ್ಪಂದಿಸಲಾಗುತ್ತದೆ ಎಂದು ಭರವಸೆ ನೀಡಿದರು. ಪೌರಕಾರ್ಮಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಕಾಳಜಿ ವಹಿಸುವಂತಾಗಬೇಕು. ಅಲ್ಲದೆ ಕರ್ತವ್ಯಕ್ಕೆ ಅಡ್ಡಿಯಾಗದ ರೀತಿಯಲ್ಲಿ ತಮ್ಮ ಸೇವೆಯನ್ನು ನಿರ್ವಹಿಸಬೇಕು ಎಂದು ಹೇಳಿದರು. ಪುರಸಭೆಯ ಹಿರಿಯ ಸದಸ್ಯ ಸಿ.ಕೆ. ಪ್ರಥ್ವಿನಾಥ್, ವಿ.ಆರ್. ರಜನಿ ಕಾಂತ್ ಮತ್ತು ಪುರಸಭೆಯ ನೂತನ ಉಪಾಧ್ಯಕ್ಷೆ ಫಸಿಯಾ ತಬ್ಸುಂ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸೇವೆಯಿಂದ ನಿವೃತ್ತರಾದ ವಸಂತ್ ಮತ್ತು ವೇಲಾ ಹಾಗೂ ಮುಖ್ಯಾಧಿಕಾರಿ ಚಂದ್ರಕುಮಾರ್ ಅವರಿಗೆ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭ ಪೌರಕಾರ್ಮಿಕರ ಕ್ರೀಡಾಕೂಟದಲ್ಲಿ ವಿಜೇತರಾದ ಪೌರ ಸಿಬ್ಬಂದಿಗಳಿಗೆ ಬಹುಮಾ ನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಪೌರಕಾರ್ಮಿಕರ ಸೇವಾ ಸಮಿತಿಯ ಅಧ್ಯಕ್ಷ ಇರ್ಫಾನ್, ಉಪಾಧ್ಯಕ್ಷ ಹೆಚ್.ಕೆ. ಸುಂದರ, ಕಾರ್ಯದರ್ಶಿ ವೇಲುಮುರುಗ, ಪುರಸಭೆಯ ಸದಸ್ಯರಾದ ಪಟ್ಟಡ ರಂಜಿ ಪೂಣಚ್ಚ, ಮಹಮ್ಮದ್ ರಾಫಿ, ಡಿ.ಪಿ. ರಾಜೇಶ್, ಅಗಸ್ಟೀನ್ ಬೆನ್ನಿ, ಎಸ್.ಹೆಚ್. ಮತೀನ್, ಅಬ್ದುಲ್ ಜಲೀಲ್, ಹೆಚ್. ಪೂರ್ಣಿಮಾ, ನಾಮ ನಿರ್ದೇಶಿತ ಸದಸ್ಯರಾದ ಮೋಹನ್ ಕುಮಾರ್ ಜಿ.ಜಿ., ದಿನೇಶ್ ನಂಬಿಯಾರ್, ಶಭರೀಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ಸೇವಾ ಸಮಿತಿಯ ಪದಾಧಿಕಾರಿಗಳು, ಪುರಸಭೆಯ ಸಿಬ್ಬಂದಿ ವರ್ಗ, ಪೌರಕಾರ್ಮಿಕರು, ಪೌರಕಾರ್ಮಿಕರ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.