ಮಡಿಕೇರಿ, ಅ. ೭: ಕೊಡವ ಯುವ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮತ್ತು ಲೆದರ್‌ಬಾಲ್ ಕ್ರಿಕೆಟ್‌ಗೆ ಉತ್ತೇಜನ ನೀಡುವ ಉದ್ದೇಶದಿಂದ ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಏ. ೧ ರಿಂದ ೨೦ ರವರೆಗೆ ಪಾಲಿಬೆಟ್ಟದಲ್ಲಿ ಕೊಡವ ಕ್ರಿಕೆಟ್ ಲೆದರ್‌ಬಾಲ್ ಪ್ರೀಮಿಯರ್ ಲೀಗ್ ಸೀಸನ್-೨ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಫೌಂಡೇಶನ್‌ನ ಅಧ್ಯಕ್ಷ ಪೊರುಕೊಂಡ ಸುನಿಲ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಬೆಟ್ಟದ ಟಾಟಾ ಕಾಫಿ ಸಂಸ್ಥೆಯ ಕ್ರಿಕೆಟ್ ಮೈದಾನದಲ್ಲಿ ಟಿ-೨೦ ಮಾದರಿಯ ಪಂದ್ಯಾವಳಿ ನಡೆಯಲಿದ್ದು, ವಿಜೇತರಿಗೆ ಆಕರ್ಷಕ ನಗದು ಹಾಗೂ ಟ್ರೋಫಿ ನೀಡಲಾಗುವುದು ಎಂದರು. ಸೀಸನ್-೧ ರ ಫ್ರಾಂಚೈಸಿಗಳು ಮುಂದುವರೆಯಲಿದ್ದು, ಇವರೊಂದಿಗೆ ಮತ್ತಷ್ಟು ಫ್ರಾಂಚೈಸಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಒಂದು ತಂಡದಲ್ಲಿ ೧೨ ಮಂದಿ ಇರಲಿದ್ದು, ಈ ಪಂದ್ಯ ಕೊಡವ ಕ್ರೀಡಾ ಪ್ರತಿಭೆಗಳಿಗೆ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಜನಾಂಗದ ಪ್ರತಿಭೆಗಳನ್ನು ಗುರುತಿಸಿ ಲೆದರ್‌ಬಾಲ್ ಕ್ರಿಕೆಟ್‌ಗೆ ಉತ್ತೇಜನ ನೀಡುವ ಗುರಿ ಹೊಂದಿದ್ದೇವೆ. ಯುವ ಪ್ರತಿಭೆಗಳು ಲೆದರ್‌ಬಾಲ್ ಕ್ರಿಕೆಟ್ ಬಗ್ಗೆ ಹೆಚ್ಚು ಆಸಕ್ತಿ ತೋರಬೇಕು ಎಂದು ಮನವಿ ಮಾಡಿದರು.
ಹೆಚ್ಚಿನ ಮಾಹಿತಿಗೆ ೯೪೮೨೪೭೨೩೨೫, ೯೬೧೧೦೮೧೦೬೭, ೯೬೮೬೧೦೭೨೯೭ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. ಉಪಾಧ್ಯಕ್ಷ ಪಾಲಚಂಡ ಜಗನ್ ಮಾತನಾಡಿ, ಈಗಾಗಲೇ ಕ್ರೀಡಾಸಕ್ತರು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಮುಂದೆ ಬಂದಿದ್ದು, ಕ್ಯಾಶ್ ಬಿಡ್ಡಿಂಗ್ ಮೂಲಕ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ವಿಜೇತ ತಂಡಕ್ಕೆ ನೀಡಲಾಗುವ ನಗದು ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗುವುದು ಎಂದರು.
ಪಾಲಿಬೆಟ್ಟದ ಟಾಟಾ ಕಾಫಿ ಸಂಸ್ಥೆಯಲ್ಲಿ ಸುಸಜ್ಜಿತವಾದ ಕ್ರಿಕೆಟ್ ಆಟದ ಮೈದಾನವಿದ್ದು, ಕೊಡಗಿನ ಯುವ ಪ್ರತಿಭೆಗಳಿಗೆ ಹೆಚ್ಚು ಸಹಕಾರಿಯಾಗಿದೆ. ಮೈದಾನದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಸಹಕಾರ ನೀಡಿರುವ ಟಾಟಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪೆಮ್ಮಂಡ ಮಂದಣ್ಣ ಹಾಗೂ ಪ್ರಧಾನ ವ್ಯವಸ್ಥಾಪಕ ಕಳ್ಳಿಚಂಡ ರಾಜೀವ್ ಗಣಪತಿ ಅವರಿಗೆ ಕೂರ್ಗ್ ಕ್ರಿಕೆಟ್ ಫೌಂಡೇಶನ್ ಕೃತಜ್ಞತೆ ಸಲ್ಲಿಸುತ್ತದೆ ಎಂದು ಹೇಳಿದರು. ಪಂದ್ಯಾವಳಿಯ ಸಂಚಾಲಕ ಮಡ್ಲಂಡ ದರ್ಶನ್ ಮಾತನಾಡಿ, ಮುಂದಿನ ಎರಡು ತಿಂಗಳೊಳಗೆ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದ್ದು, ಜನವರಿಯಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಫೌಂಡೇಶನ್‌ನ ನಿರ್ದೇಶಕರಾದ ಅಣ್ಣಳಮಾಡ ರಾಯ್ ಚಿಣ್ಣಪ್ಪ, ಕೀತಿಯಂಡ ಗಣಪತಿ ಹಾಗೂ ಬಲ್ಲಂಡ ರೇಣ ದೇವಯ್ಯ ಉಪಸ್ಥಿತರಿದ್ದರು.