ಸೋಮವಾರಪೇಟೆ, ಅ. ೭: ಕಾಫಿ ಮಂಡಳಿ ವತಿಯಿಂದ ಕಾಫಿ ಬೆಳೆಗಾರರಿಗೆ ರೂ. ೩೦೭ ಕೋಟಿಯ ಸಹಾಯ ಧನ ಯೋಜನೆ ಇದ್ದು, ಬೆಳೆಗಾರರು ಇದನ್ನು ಬಳಸಿಕೊಳ್ಳಬೇಕು ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಹೇಳಿದರು.

ತಾಲೂಕು ಕಾಫಿ ಬೆಳೆಗಾರರ ಸಂಘದ ಕಚೇರಿಗೆ ಭೇಟಿ ನೀಡಿ, ಸ್ಥಳೀಯ ಬೆಳೆಗಾರರೊಂದಿಗೆ ಮಾತನಾಡಿದ ಅವರು, ಅರೇಬಿಕಾ ಕಾಫಿ ಬೆಳೆಗಾರರು ಮೊದಲು ಸಂಘಟಿತರಾಗಬೇಕಿದೆ. ನಂತರ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಡಿದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದರು.

ಈಗಾಗಲೇ ಸಾಂಪ್ರದಾಯಿಕವಾಗಿ ಕಾಫಿ ಬೆಳೆಯುವ ದೇಶಗಳನ್ನು ಬಿಟ್ಟು, ಸಾಕಷ್ಟು ದೇಶಗಳಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದೆ. ಅದರ ನೇತೃತ್ವವನ್ನು ಪ್ರಪಂಚದ ಮೂರು ಬೃಹತ್ ಕಂಪೆನಿಗಳು ವಹಿಸಿದ್ದು, ಮುಂದಿನ ೫೦ ವರ್ಷಗಳಿಗೆ ಬೇಕಾಗುವ ಕಾಫಿಯನ್ನು ಉತ್ಪಾದಿಸಲಾಗುತ್ತಿದೆ. ಆದುದರಿಂದ ಬೆಳೆಗಾರರು ಆಲಸ್ಯದಿಂದ ಹೊರಬಂದು ನೂತನ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಸಹಾಯಕ್ಕಾಗಿ ಸರ್ಕಾರವನ್ನು ಕಾಯದೆ, ಲಾಭದಾಯಕವಾಗಿ ಕಾಫಿ ಬೆಳೆಯಲು ಚಿಂತಿಸಬೇಕೆAದರು.

ಸ್ಥಳೀಯ ಅರೇಬಿಕಾ ಬೆಳೆಗಾರರು ತಿಂಗಳಿಗೆ ಒಂದು ದಿನ ಸಂಘದ ಕಚೇರಿಯಲ್ಲಿ ಸೇರಿದ್ದಲ್ಲಿ, ಕಾಫಿ ಮಂಡಳಿಯ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳನ್ನು ಕರೆಸಿ ಲಾಭದಾಯಕವಾಗಿ ಕಾಫಿ ಬೆಳೆಯುವುದು, ಮಾರುಕಟ್ಟೆ ಸೇರಿದಂತೆ ಇನ್ನಿತರ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಮಾತನಾಡಿ, ಸೋಮವಾರ ಪೇಟೆಯು ಜಿಲ್ಲೆಯಲ್ಲಿ ಅರೇಬಿಕಾ ಕಾಫಿ ಬೆಳೆಯುವ ಪ್ರಮುಖ ಪ್ರದೇಶವಾಗಿದ್ದು, ಇತ್ತೀಚೆಗೆ ಕಾಫಿ ಕೃಷಿ ಅವನತಿಯತ್ತ ಸಾಗುತ್ತಿದೆ.

ಹವಾಮಾನ ವೈಪರಿತ್ಯದಿಂದಾಗಿ ಈಗಾಗಲೇ ಹೆಚ್ಚಿನ ಅರೇಬಿಕಾ ಬೆಳೆಗಾರರು ರೋಬಸ್ಟಾ ಕಾಫಿ ಬೆಳೆಯುವತ್ತ ಸಾಗಿದ್ದಾರೆ. ಈ ನಿಟ್ಟಿನಲ್ಲಿ ಹವಾಮಾನಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿರುವ ಅರೇಬಿಕಾ ಕಾಫಿ ಕಣ್ಮರೆಯಾಗುವುದನ್ನು ತಪ್ಪಿಸಲು ಕಾಫಿ ಮಂಡಳಿ ಮತ್ತು ಸರ್ಕಾರಗಳು ವಿಶೇಷ ಪ್ಯಾಕೇಜ್ ಘೋಷಣೆಗೆ ಮುಂದಾಗಬೇಕು ಎಂದರು.

ಕ್ರಿಮಿನಾಶಕ, ಗೊಬ್ಬರ, ಮೈಲ್‌ತುತ್ ಸೇರಿದಂತೆ ಇತರ ಪರಿಕರಗಳಿಗೆ ಇನ್ನೂ ಹೆಚ್ಚಿನ ಸಹಾಯಧನ ನೀಡಬೇಕು. ಪ್ರಸಕ್ತ ಸಾಲಿನಲ್ಲಿ ದಾಖಲೆಯ ಮಳೆಗೆ ಕಾಫಿ ನಷ್ಟವಾಗಿದ್ದು, ಬೆಳೆಗಾರರ ಫಸಲು ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ವಾಣಿಜ್ಯ ಬ್ಯಾಂಕ್‌ಗಳು ಬೆಳೆಗಾರರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲು ಮುಂದಾಗಬೇಕು ಎಂದ ಅವರು, ಈ ಸಂಬAಧಿತ ಮನವಿಯನ್ನು ಮಂಡಳಿಯ ಅಧ್ಯಕ್ಷರಿಗೆ ಸಲ್ಲಿಸಿದರು.

ವೇದಿಕೆಯಲ್ಲಿ ಕಾಫಿ ಮಂಡಳಿ ಸದಸ್ಯ ಕಿಶೋರ್, ಹಿರಿಯ ಕಾಫಿ ಬೆಳೆಗಾರರಾದ ಎಸ್.ಜಿ. ಮೇದಪ್ಪ, ಬಿ.ಡಿ. ಮಂಜುನಾಥ್, ಲವಕುಮಾರ್ ಸೇರಿದಂತೆ ಇತರರು ಇದ್ದರು.