ಕುಶಾಲನಗರ, ಅ.೭: ಮನೆಯಲ್ಲಿ ಕುಟುಂಬ ಸದಸ್ಯರ ನಡುವೆ ನಡೆದ ಕ್ಷುಲ್ಲಕ ಕಲಹಕ್ಕೆ ಮನನೊಂದು ಯುವತಿ ಒಬ್ಬಳು ಕಾವೇರಿ ನದಿ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಸಂದರ್ಭ ಸ್ಥಳೀಯರು ಹಾಗೂ ತಪಾಸಣಾ ಗೇಟ್ ಸಿಬ್ಬಂದಿಗಳು ಸಮಯಪ್ರಜ್ಞೆಯಿಂದ ಯುವತಿಯ ಜೀವ ಉಳಿಸಿದ ಘಟನೆ ಕುಶಾಲನಗರದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಕುಶಾಲನಗರ -ಕೊಪ್ಪ ಕಾವೇರಿ ಸೇತುವೆ ಬಳಿ ಘಟನೆ ೧೧ ಗಂಟೆಗೆ ನಡೆದಿದ್ದು, ಕೊಪ್ಪ ಗ್ರಾಮದ ರಸ್ತೆ ಬದಿಯಲ್ಲಿ ಟೆಂಟ್ ಹಾಕಿಕೊಂಡು ಕುಟುಂಬ ಸದಸ್ಯರ ಜೊತೆ ಭಿಕ್ಷಾಟನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಯುವತಿ ಕಾವೇರಿ ಸೇತುವೆ ಮೇಲ್ಭಾಗದ ಗೋಡೆಯಲ್ಲಿ ಹತ್ತಿ ನದಿಗೆ ಹಾರಲು ಪ್ರಯತ್ನಿಸುತ್ತಿದ್ದ ಸಂದರ್ಭ ಸ್ಥಳೀಯರು ತಕ್ಷಣ ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿ ಅಲ್ಲಿ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.

ಎಚ್ಚೆತ್ತ ಸಿಬ್ಬಂದಿಗಳಾದ ಸಿದ್ದರಾಜು ಮತ್ತು ಪುರುಷೋತ್ತಮ್ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳಿ ನದಿಗೆ ಹಾರಲು ಪ್ರಯತ್ನಿಸುತ್ತಿದ್ದ ಮಹಿಳೆಯನ್ನು ಸೇತುವೆಯ ತಡೆಗೋಡೆಯಿಂದ ರಸ್ತೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾವು ತೆರಳಲು ಒಂದು ಕ್ಷಣ ತಡವಾಗಿದ್ದರೂ ಯುವತಿ ನದಿ ಪಾಲಾಗುತ್ತಿದ್ದಳು ಎಂದು ಆಕೆಯನ್ನು ರಕ್ಷಿಸಿದ ಸಿಬ್ಬಂದಿಗಳು ‘ಶಕ್ತಿ’ಗೆ ತಿಳಿಸಿದ್ದಾರೆ. ನಂತರ ಯುವತಿಯನ್ನು ಸಮಾಧಾನಿಸಿ ತಕ್ಷಣ ಕುಶಾಲನಗರ ಪೊಲೀಸ್ ಠಾಣೆ ಮತ್ತು ೧೧೨ ಸಹಾಯವಾಣಿ ಪೊಲೀಸರಿಗೆ ಮಾಹಿತಿ ನೀಡಿ ಯುವತಿಯನ್ನು ಕಳುಹಿಸಿ ಕೊಟ್ಟಿದ್ದಾರೆ. ಸಂಬAಧಿಕರು ತನಗೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ತಾನು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಯುವತಿ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.

ಪೊಲೀಸರು ಕುಟುಂಬ ಸದಸ್ಯರನ್ನು ಕರೆಸಿ ಅವರಿಗೆ ಬುದ್ಧಿವಾದ ಹೇಳಿ ಯುವತಿಯನ್ನು ಅವರ ವಶಕ್ಕೆ ನೀಡಿದ್ದಾರೆ. ಯುವತಿ ಹುಣಸೂರು ಬಳಿಯ ಪಕ್ಷಿರಾಜಪುರದ ನಿವಾಸಿ ಎಂದು ತಿಳಿದು ಬಂದಿದೆ. ಅಲ್ಲಿನ ಕೆಲವು ಕುಟುಂಬ ಸದಸ್ಯರು ಕೊಪ್ಪ ಬಳಿ ಹೆದ್ದಾರಿ ಬದಿಯಲ್ಲಿ ಟೆಂಟ್ ಹಾಕಿ ಹಸುಗಳನ್ನು ಸಿಂಗರಿಸಿಕೊAಡು ತಮ್ಮ ಜೊತೆ ಒಯ್ಯುವ ಮೂಲಕ ಜನರಿಂದ ಹಣ ಸಂಗ್ರಹಿಸಿ ಜೀವನ ಸಾಗಿಸುತ್ತಿರುವುದು ದಿನನಿತ್ಯದ ಕಾಯಕವಾಗಿದೆ.

ಆತ್ಮಹತ್ಯೆ ಪ್ರಯತ್ನ ಇದೀಗ ಅಪರಾಧ ಅಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಯುವತಿಯ ಮೇಲೆ ಯಾವುದೇ ರೀತಿಯ ಮೊಕದ್ದಮೆ ದಾಖಲಾಗಿಲ್ಲ ಎಂದು ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ತಿಳಿಸಿದ್ದಾರೆ.

ಸಮಯ ಪ್ರಜ್ಞೆ ಮೆರೆದು ಯುವತಿಯ ಜೀವ ಕಾಪಾಡಿದ ಕುಶಾಲನಗರ ಅರಣ್ಯ ಇಲಾಖೆಯ ತಪಾಸಣಾ ಚೆಕ್ ಪೋಸ್ಟ್ ಕರ್ತವ್ಯ ನಿರತ ವನಪಾಲಕ ಸಿದ್ದರಾಜು ಮತ್ತು ಆರ್ ಆರ್ ಟಿ ತಂಡದ ಪುರುಷೋತ್ತಮ್ ಹಾಗೂ ಸ್ಥಳೀಯರ ಕಾರ್ಯದ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

-ಚಂದ್ರಮೋಹನ್