ಮಡಿಕೇರಿ, ಅ. ೯: ಛೇ... ಇದೆಂತಹಾ ಒಂದು ದುರಂತ... ಕೂಲಿ ಕಾರ್ಮಿಕರೊಬ್ಬರು ತಮ್ಮ ಕೆಲಸದ ಸಂದರ್ಭ ಜೀವನಕ್ಕೆ ಆಧಾರವಾದ ಬಲಗೈಯನ್ನೇ ಶಾಶ್ವತವಾಗಿ ಕಳೆದುಕೊಂಡು ಬಿಟ್ಟಿದ್ದಾರೆ. ಈ ಕರುಣಾಜನಕ ದೃಶ್ಯ ಇಂದು ಸಂಜೆ ವೇಳೆ ಮಡಿಕೇರಿಯಲ್ಲಿ ಸಂಭವಿಸಿದ್ದು, ಎಲ್ಲರ ಹೃದಯ ಹಿಂಡುವAತೆ ಮಾಡಿತ್ತು.

ಮಡಿಕೇರಿ ಟಿ.ಜಾನ್ ಬಡಾವಣೆಯ ನಿವೇಶನವೊಂದರಲ್ಲಿ ಮನೆ ಕಟ್ಟುವ ಕೆಲಸಕ್ಕಾಗಿ ಪೂರ್ವ ತಯಾರಿ ನಡೆಯುತ್ತಿದೆ. ಅಲ್ಲಿ ಕಾಂಕ್ರೀಟ್ ಅಡಿಪಾಯಕ್ಕಾಗಿ ಕೆಲಸ ನಡೆದಿದ್ದು, ಕಾಂಕ್ರೀಟ್ ಮಿಕ್ಸರ್ ಯಂತ್ರಕ್ಕೆ ಆಕಸ್ಮಿಕವಾಗಿ ಕೈ ಸಿಲುಕಿಕೊಂಡು ಈ ವ್ಯಕ್ತಿ ಇದೀಗ ತಮ್ಮ ಬಲಗೈಯನ್ನು ಶಾಶ್ವತವಾಗಿ ಕಳೆದುಕೊಡಿದ್ದು, ಭವಿಷ್ಯ ಅತಂತ್ರ ಎಂಬAತಾಗಿದೆ.

ಕನ್ನಂಡಬಾಣೆಯವರಾದ ೨೭ ವರ್ಷ ಪ್ರಾಯದ ಯುವ ಕಾರ್ಮಿಕ ಹರೀಶ್ ಕುಮಾರ್ ಈ ದುರಂತಕ್ಕೆ ಸಿಲುಕಿಕೊಂಡವರಾಗಿದ್ದಾರೆ. ಮಿಕ್ಸರ್ ಯಂತ್ರಕ್ಕೆ ಗ್ರೀಸಿಂಗ್ ಮಾಡಲು ಅವರು ಮುಂದಾಗಿದ್ದರು ಎನ್ನಲಾಗಿದೆ. ಈ ವೇಳೆ ಅವರ ಕೈ ಆಕಸ್ಮಿಕವಾಗಿ ಚಾಲನೆಯಿಲ್ಲಿದ್ದ ಮಿಕ್ಸರ್ ಯಂತ್ರದ ನಡುವೆ ಸಿಲುಕಿಕೊಂಡಿದೆ. ಜತೆಗಿದ್ದವರು ಕೂಡಲೇ ಯಂತ್ರವನ್ನು ಸ್ಥಗಿತಗೊಳಿಸಿದರೂ ಕೈಯನ್ನು ಎಳೆಯಲು ಸಾಧ್ಯವಾಗುತ್ತಿರಲಿಲ್ಲ. ನೆರೆಕರೆಯವರು ಇವರನ್ನು ರಕ್ಷಿಸಲು ಭಾರೀ ಪ್ರಯತ್ನ ಪಟ್ಟಿದ್ದಾರೆ.

ಬಳಿಕ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು ಅಗ್ನಿಶಾಮಕ ದಳದ ಸಿಬ್ಬಂದಿಗಳೂ ಧಾವಿಸಿ ಬಂದಿದ್ದಾರೆ. ಸ್ಥಳೀಯರಾದ ಬೈರೇಟಿರ ಅಜಿತ್ ಪೂಣಚ್ಚ ‘ಶಕ್ತಿ’ಯ ಸಿಬ್ಬಂದಿ ಮಣಿ ಅವರುಗಳು ಭಾರೀ ಶ್ರಮ ವಹಿಸಿದ್ದರು. ಸನಿಹದ ಇತರರೂ ಸಹಕರಿಸಿದ್ದಾರೆ. ಮಿಕ್ಸರ್ ಯಂತ್ರವನ್ನು ಅಗತ್ಯ ಪರಿಕರ ತಂದು ಮೇಲೆ ಎತ್ತಲು ತೀವ್ರ ಕಸರತ್ತು ನಡೆಸಬೇಕಾಯಿತು. ಮುಕ್ಕಾಲು ಗಂಟೆಯ ಪ್ರಯತ್ನದ ಬಳಿಕ ಯಂತ್ರಕ್ಕೆ ಕೈ ಸಿಲುಕಿಕೊಂಡು ಒದ್ದಾಡುತ್ತಿದ್ದ ಹರೀಶ್ ಕುಮಾರ್‌ನನ್ನು ಬಿಡಿಸುವಲ್ಲಿ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸಫಲರಾಗಿದ್ದಾರೆ. ಬಳಿಕ ಅವರನ್ನು ಅಜಿತ್ ಪೂಣಚ್ಚ ಅವರ ಕಾರಿನಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿದ್ದಾರೆ. ಈ ದುರಂತದಲ್ಲಿ ಅವರ ಬಲಗೈ ಸಂಪೂರ್ಣವಾಗಿ ಜಜ್ಜಿ ಹೋಗಿದ್ದು ಕೈಯನ್ನು ಶಾಶ್ವತವಾಗಿ ಕಳೆದುಕೊಳ್ಳು ವಂತಾಗಿರುವುದು ಬೇಸರದ ವಿಷಯವಾಗಿದೆ.

ಅಗ್ನಿಶಾಮಕ ದಳದ ಸಬ್‌ಇನ್ಸ್ಪೆಕ್ಟರ್ ಶೋಭಿತ್ ಪಿ.ಕೆ. ಸಿಬ್ಬಂದಿಗಳದ ಮಹಮದ್ ಶಾಹಿದ್, ನಂಜಪ್ಪ, ಲಿಂಗಪ್ಪ, ಸಂತೋಷ್ ಕುಮಾರ್, ಪರಿತ್ ಶಿವರಾಜ್, ಆನಂದ್, ಸಿದ್ದಪ್ಪ, ಮಂಜುನಾಥ್ ಅವರುಗಳು ರಕ್ಷಣಾ ಕಾರ್ಯಕ್ಕೆ ಸಹಕರಿಸಿದ್ದಾರೆ. ಘಟನೆ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ. ಗಾಯಾಳು ಹರೀಶ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.