ಕೂಡಿಗೆ, ಅ. ೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ- ಸೀಗೆಹೊಸೂರು ಗ್ರಾಮದವರೆಗಿನ ಕಾಂಕ್ರೀಟ್ ರಸ್ತೆಯು ಕಳಪೆ ಕಾಮಗಾರಿಯಿಂದ ಕೂಡಿದೆ ಹಾಗೂ ಇಲಾಖೆಯ ನಿಯಮಾನುಸಾರ ನಡೆದಿಲ್ಲ ಎಂದು ಸೋಮವಾರಪೇಟೆಯ ಬಿ.ಪಿ. ಅನಿಲ್ ಕುಮಾರ್ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳ ತಂಡವು ಮದಲಾಪುರ ಸೀಗೆಹೊಸೂರು ಗ್ರಾಮಕ್ಕೆ ಭೇಟಿ ನೀಡಿ ಕಾಂಕ್ರೀಟ್ ರಸ್ತೆಯ ಪರಿಶೀಲನೆ ನಡೆಸಿತು.

೨೦೨೦ರ ಕೊಡಗು ಪ್ಯಾಕೇಜ್ ಅನುದಾನದ ರೂ. ೬೦. ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆಯ ಕಾಮಗಾರಿಯು ಲೋಕೋಪಯೋಗಿ ಇಲಾಖೆಯ ಬಂದರು. ಒಳನಾಡು ಮತ್ತು ಜಲಸಾರಿಗೆ ಇಲಾಖೆಯ ನಿಯಮದ ಅಡಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಖೇನ ನಡೆದು ರಸ್ತೆಯ ಕಾಮಗಾರಿ ನಡೆದಿತ್ತು.

ಅದರೆ, ಈ ಕಾಮಗಾರಿಯು ಕಳಪೆ ಮತ್ತು ಬಿರುಕು ಬಿಟ್ಟಿದೆ ಎಂದು ರಾಜ್ಯ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಮನವಿ ಪತ್ರವನ್ನು ನೀಡಿದರೂ ಯಾವುದೇ ಕ್ರಮವನ್ನು ತೆಗೆದುಕೊಳ್ಳದ ಹಿನ್ನೆಲೆ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗೆ ದೂರು ನೀಡಲಾಗಿತ್ತು.

ಲೋಕಾಯುಕ್ತ ತನಿಖಾಧಿಕಾರಿ ಪ್ರಸನ್ನಕುಮಾರ್, ದೂರುದಾರ ಬಗ್ಗನ ಅನಿಲ್‌ಕುಮಾರ್, ಲೋಕೋಪಯೋಗಿ ಕಾರ್ಯ ಪಾಲಕ ಅಭಿಯಂತರ ದೊಡ್ಡ ಸಿದ್ದಯ್ಯ, ಸಹಾಯಕ ಅಭಿಯಂತರ ವೆಂಕಟೇಶ್ ನಾಯಕ್, ಅಭಿಯಂತರ ವಿಜಯಕುಮಾರ್, ಹಿಂದಿನ ಕಾರ್ಯ ಅಭಿಯಂತರ ಮದನ್ ಮೋಹನ್, ನಾಗರಾಜ, ಈ ಸಂದರ್ಭ ಇದ್ದರು.