ಸೋಮವಾರಪೇಟೆ, ಅ. ೯: ಪಟ್ಟಣ ಹೊರವಲಯದ ಕಾರೆಕೊಪ್ಪದಲ್ಲಿ ಕಾರಿನ ಮೇಲೆ ಒಂಟಿ ಸಲಗ ದಾಳಿ ನಡೆಸಿದ್ದು, ಕಾರಿನಲ್ಲಿದ್ದ ಈರ್ವರು ಯುವಕರು ಪ್ರಾಣಾಪಾಯ ದಿಂದ ಪಾರಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಪಟ್ಟಣ ಸಮೀಪದ ತಲ್ತರೆಶೆಟ್ಟಳ್ಳಿ ಗ್ರಾಮದ ಬಿ.ಸಿ. ಪ್ರಮೋದ್ ಮತ್ತು ಪಟ್ಟಣದ ನಿವಾಸಿ ಕೌಶಿಕ್ ಅವರುಗಳು ಮೈಸೂರಿನಿಂದ ಸೋಮವಾರಪೇಟೆಗೆ ಹಿಂತಿರುಗುತ್ತಿದ್ದ ಸಂದರ್ಭ ರಾತ್ರಿ ೧೦.೩೦ರ ಸುಮಾರಿಗೆ ಯಡವನಾಡು ಮೀಸಲು ಅರಣ್ಯಕ್ಕೆ ಒತ್ತಿಕೊಂಡಿರುವ ಕಾರೆಕೊಪ್ಪದ ಬಳಿ ರಾಜ್ಯ ಹೆದ್ದಾರಿಗೆ ದಿಢೀರ್ ಬಂದ ಕಾಡಾನೆ, ಕಾರಿನ ಮೇಲೆ ಏಕಾಏಕಿ ದಾಳಿ ನಡೆಸಿದೆ.

ಕಾರಿನಲ್ಲಿದ್ದ ಈರ್ವರೂ ಜೀವ ಭಯದಿಂದ ಕಾರಿನಿಂದ ಹೊರಬಂದು ಓಡಿ ತಪ್ಪಿಸಿಕೊಂಡಿದ್ದಾರೆ. ಓರ್ವ ಕಾಫಿ ತೋಟದೊಳಗೆ ಓಡಿದ್ದು, ಸೋಲಾರ್ ತಂತಿ ಬೇಲಿ ಅಳವಡಿಸಿದ್ದ ಕಾರಣ ಕಾಡಾನೆ ಅಟ್ಟಿಸಿಕೊಂಡು ಹೋಗಿಲ್ಲ. ಇನ್ನೋರ್ವ ಮನೆಯೊಂದರ ಗೇಟ್ ದಾಟಿ ತಪ್ಪಿಸಿಕೊಂಡಿದ್ದಾರೆ. ನಂತರ ಕಾಡಾನೆ ಕಾರನ್ನು ೧೦ ಮೀಟರ್ ದೂರಕ್ಕೆ ತಳ್ಳಿ ಇನ್ನಷ್ಟು ಜಖಂಗೊಳಿಸಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಜಖಂಗೊAಡಿರುವ ಕಾರನ್ನು ದುರಸ್ತಿ ಪಡಿಸಲು ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ವಿಳಂಬವಾಗಿ ಬಂದಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಕೆಲಕಾಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ.

ಎಸಿಎಫ್ ಗೋಪಾಲ್, ಆರ್‌ಎಫ್‌ಓ ಶೈಲೇಂದ್ರ, ಫಾರೆಸ್ಟರ್ ನಾರಾಯಣ ಮೂಲ್ಯ ಸೇರಿದಂತೆ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.