ಮಡಿಕೇರಿ, ಅ. ೯: ಓಡಿಶ್ಶಾ ರಾಜ್ಯದಿಂದ ಗಾಂಜಾ ತಂದು ಕೇರಳದವರಿಗೆ ಮಾರಾಟ ಮಾಡುವ ಸಂದರ್ಭ ಸೆನ್ ಪೊಲೀಸರು ದಾಳಿ ನಡೆಸಿ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ.

ಓಡಿಶಾ ಮೂಲದ ಸೂರ್ಯಕಾಂತ್ ಮೊಹಂತಿ, ಸುಂಟಿಕೊಪ್ಪದ ಸಾಹಿಲ್ ಪಾಶ, ಕೇರಳದ ಕಣ್ಣೂರಿನ ಸ್ವರಾಗ್ ಹಾಗೂ ಅಜಿತ್ ಸನ್ನಿ ಬಂಧಿತ ಆರೋಪಿಗಳು.

ಓಡಿಶಾ ಮೂಲದ ಸೂರ್ಯಕಾಂತ್ ಕೆಲ ವರ್ಷದ ಹಿಂದೆ ಕೊಡಗಿಗೆ ಬಂದು ವೀರಾಜಪೇಟೆಯಲ್ಲಿ ಅಂಗಡಿ ನಡೆಸುತ್ತಿದ್ದ. ಅನಂತರ ನಷ್ಟದಿಂದ ವ್ಯಾಪಾರ ಸ್ಥಗಿತಗೊಳಿಸಿದ್ದ. ಕೆಲ ದಿನಗಳ ಹಿಂದೆ ಓಡಿಶ್ಶಾದಿಂದ ಗಾಂಜಾ ತಂದು ಸುಂಟಿಕೊಪ್ಪದ ಜಾಹಿದ್ ಮೂಲಕ ಕೇರಳದವರಿಗೆ ಮೂರ್ನಾಡು ಬಳಿಯ ಬಸ್ ನಿಲ್ದಾಣದಲ್ಲಿ ಗಾಂಜಾ ಮಾರಾಟ ಮಾಡಲು ಯೋಜನೆ ರೂಪಿಸಿದ್ದ. ಈ ಕುರಿತು ಖಚಿತ ಮಾಹಿತಿ ದೊರೆತ ಮೇರೆಗೆ ದಾಳಿ ನಡೆಸಿದ ಸೆನ್ ಹಾಗೂ ಡಿಸಿಎಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ ೨.೩೫೭ ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಂದರ್ ರಾಜ್ ಮಾರ್ಗದರ್ಶನದ, ಸೆನ್ ವಿಭಾಗದ ಡಿವೈಎಸ್‌ಪಿ ರವಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಐಬಿ ಸಿಬ್ಬಂದಿಗಳಾದ ಯೋಗೇಶ್, ನಿರಂಜನ್, ಶರತ್ ರೈ, ಮುನೀರ್, ಸೆನ್ ಠಾಣೆಯ ಅಪರಾಧ ಪತ್ತೆ ವಿಭಾಗದ ಪುನೀತ್, ಅಜಯ್, ಅಭಿಲಾಷ್ ಗೌಡ, ಸಿಡಿಆರ್ ಘಟಕದ ಸಿಬ್ಬಂದಿಗಳಿದ್ದರು.