ಕಣಿವೆ, ಅ. ೮: ತಾಲೂಕು ಕೇಂದ್ರಗಳಲ್ಲಿ ಇರುವ ಸಮುದಾಯ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆ ಗೇರಿಸಿ ಸಾರ್ವಜನಿಕರಿಗೆ ಹೆಚ್ಚಿನ ಆರೋಗ್ಯ ಸೇವೆ ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಕೊಡಗಿನ ಪ್ರವೇಶ ದ್ವಾರ ಕುಶಾಲನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿದ ಸಂದರ್ಭ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಕುಶಾಲನಗರ ಆಸುಪಾಸಿನಲ್ಲಿ ಅತೀ ಅಗತ್ಯವಾಗಿ ತಾಯಿ ಮಗುವಿನ ಆಸ್ಪತ್ರೆ ನಿರ್ಮಾಣವಾಗಬೇಕಿದೆ. ಈ ಬಗ್ಗೆ ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯೂ ಇರುವ ಜಾಗವನ್ನು ಪರಿಶೀಲಿಸಲಾಗಿದೆ.

ಸೂಕ್ತವಾಗಿ ಕಂಡುಬರುವ ಜಾಗದಲ್ಲಿ ತಾಯಿ ಮಗು ಆರೋಗ್ಯ ಕೇಂದ್ರ ತೆರೆಯಲಾಗುವುದು. ಹಾಗೆಯೇ ತಾಲೂಕು ಕೇಂದ್ರಗಳಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ಉನ್ನತೀಕರಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಈ ಸಂದರ್ಭ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಕೆಪಿಸಿಸಿ ಪದಾಧಿಕಾರಿ ಮಂಜುನಾಥ ಗುಂಡೂರಾವ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷಿö್ಮ ಚಂದ್ರು, ಕೂಡ ಅಧ್ಯಕ್ಷ ಪ್ರಮೋದ್, ಪಕ್ಷದ ಪ್ರಮುಖರಾದ ಆನಂದ್, ಅಣ್ಣಯ್ಯ, ರೋಷನ್, ಕಿರಣ್, ನವೀನ್ ಮೊದಲಾದವರು ಇದ್ದರು.