ಮಡಿಕೇರಿ, ಅ. ೯: ಈ ಹಿಂದೆ ಕೆಲವಾರು ವರ್ಷಗಳು ನಿರಂತರವಾಗಿ ನಡೆದುಕೊಂಡು ಬಂದಿದ್ದು ಬಳಿಕ ಕಾರಣಾಂತರ ಗಳಿಂದ ಸ್ಥಗಿತಗೊಂಡಿದ್ದ ನಾಲ್‌ನಾಡ್ ಕಪ್ ಹಾಕಿ ಪಂದ್ಯಾವಳಿಗೆ ಇದೀಗ ಮರು ಚಾಲನೆ ನೀಡಲಾಗುತ್ತಿದೆ. ಬಲ್ಲಮಾವಟಿಯ ನಾಲ್‌ನಾಡ್ ಹಾಕಿ ಕ್ಲಬ್ ವತಿಯಿಂದ ನಾಲ್‌ನಾಡ್ ವ್ಯಾಪ್ತಿಯ ಪುರುಷರ ಅಂತರ ಗ್ರಾಮ ಹಾಕಿ ಪಂದ್ಯಾವಳಿ ಮತ್ತು ನಾಲ್‌ನಾಡ್ ವ್ಯಾಪ್ತಿಯ ಮಹಿಳೆಯರ ಅಂತರ ಗ್ರಾಮ ಹಗ್ಗಜಗ್ಗಾಟ ಸ್ಪರ್ಧೆ ತಾ. ೨೯ ರಿಂದ ನವೆಂಬರ್ ೨ ರವರೆಗೆ ಬಲ್ಲಮಾವಟಿ ನೇತಾಜಿ ವಿದ್ಯಾಸಂಸ್ಥೆ ಆಟದ ಮೈದಾನದಲ್ಲಿ ನಡೆಯಲಿದೆ ಎಂದು ಪಂದ್ಯಾಟದ ಸಂಚಾಲಕ ಅಪ್ಪಚ್ಚೆಟೋಳಂಡ ಮನು ಮುತ್ತಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ನಿಗದಿಯಾಗಿದ್ದ ಈ ಪಂದ್ಯಾವಳಿಯನ್ನು ಮಳೆಯ ಕಾರಣ ಮುಂದೂಡಲಾಗಿತ್ತು. ೨೦೦೧ ರಿಂದ ೨೦೧೨ರ ತನಕ ನಿರಂತರವಾಗಿ ನಡೆಯುತ್ತಾ ಬರುತ್ತಿದ್ದ ಈ ಪಂದ್ಯಾವಳಿ ಕಾರಣಾಂತರದಿAದ ಸ್ಥಗಿತಗೊಂಡಿತ್ತು. ಇದೀಗ ಪುನರಾರಂಭಗೊಳ್ಳುತ್ತಿದ್ದು ೨೦೨೩ರಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವ ಆಯೋಜಿಸಿದ್ದ ಅಪ್ಪಚ್ಚೆಟ್ಟೋಳಂಡ ಕುಟುಂಬಸ್ಥರು ಈ ಪಂದ್ಯಾವಳಿಯ ಪ್ರಾಯೋಜಕರಾಗಿದ್ದಾರೆ. ಪಂದ್ಯಾವಳಿ ಮತ್ತೆ ಪ್ರಾರಂಭಗೊಳ್ಳುತ್ತಿದೆ ಎಂದು ಮನು ಮುತ್ತಪ್ಪ ವಿವರವಿತ್ತರು.

ಕ್ಲಬ್‌ನ ಕಾರ್ಯದರ್ಶಿ ಚಂಗೇಟಿರ ಸೋಮಣ್ಣ ಮಾತನಾಡಿ, ಹಾಕಿ ಪಂದ್ಯಾವಳಿಯ ಪ್ರಥಮ ಸ್ಥಾನದ ಟ್ರೋಫಿಯನ್ನು ನೆಲಜಿ ಗ್ರಾಮದ ಮಾಳೆಯಂಡ ದಿ. ಲಲಿತ ಚೋಂದವ್ವ ಜ್ಞಾಪಕಾರ್ಥವಾಗಿ ಅವರ ಪತಿ ಭೀಮಯ್ಯ ಮತ್ತು ಮಗ ಬಿನ್ನು ಪೊನ್ನಣ್ಣ, ದ್ವಿತೀಯ ಸ್ಥಾನದ ಟ್ರೋಫಿಯನ್ನು ಪೇರೂರು ಗ್ರಾಮದ ಮೂವೇರ ದಿ. ಚಂಗಪ್ಪ ಮತ್ತು ಅಂಬಿಕ ಅವರ ಜ್ಞಾಪಕಾರ್ಥ ಅವರ ಮಗ ವಿಜು ಮಂದಣ್ಣ ನೀಡಲಿದ್ದಾರೆ. ಮಹಿಳೆಯರ ಹಗ್ಗಜಗ್ಗಾಟದ ಪ್ರಥಮ ಟ್ರೋಫಿಯನ್ನು ಬಲ್ಲಮಾವಟಿ ಗ್ರಾಮದ ಚೀಯಂಡಿರ ದಿ. ಗಣಪತಿ ಅವರ ಜ್ಞಾಪಕಾರ್ಥವಾಗಿ ಪತ್ನಿ ಲಲಿತ ಮತ್ತು ಮಗ ದಿನೇಶ್, ದ್ವಿತೀಯ ಸ್ಥಾನ ಟ್ರೋಫಿಯನ್ನು ಪೇರೂರು ಗ್ರಾಮದ ಮಚ್ಚುರ ದಿ. ಮಂದಣ್ಣ ಅವರ ಜ್ಞಾಪಕಾರ್ಥವಾಗಿ ಮಗ ಯದು ಕುಮಾರ್ ನೀಡಲಿದ್ದಾರೆ. ಪಂದ್ಯಾವಳಿಯಲ್ಲಿ ನಾಲ್‌ನಾಡ್ ವ್ಯಾಪ್ತಿಯ ೧೬ ತಂಡಗಳು ಭಾಗವಹಿಸಲಿವೆ ಎಂದರು.

ಹಾಕಿಗೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಪಂದ್ಯಾವಳಿಯನ್ನು ಪ್ರಾರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಶಾಲೆಯ ಬೇಸಿಗೆ ರಜೆಯ ದಿನಗಳಲ್ಲಿ ಕಿರಿಯ ಮಕ್ಕಳಿಗೆ ನುರಿತ ತರಬೇತುದಾರರಿಂದ ಉಚಿತ ತರಬೇತಿ ನೀಡಲಾಗುವುದು ಎಂದು ಮನು ಮುತ್ತಪ್ಪ ಹೇಳಿದರು.

ಗೋಷ್ಠಿಯಲ್ಲಿ ಕ್ಲಬ್‌ನ ಅಧ್ಯಕ್ಷ ಕರವಂಡ ಸುರೇಶ್, ಖಜಾಂಚಿ ಚೀಯಂಡಿರ ದಿನೇಶ್, ಸಹಕಾರ್ಯದರ್ಶಿ ಮಚ್ಚುರÀ ಯದುಕುಮಾರ್ ಉಪಸ್ಥಿತರಿದ್ದರು.