ಮಡಿಕೇರಿ, ಅ. ೮: ಪರಿಸರದ ಕುರಿತು ಒಲವು ಮೂಡಿಸುವ ನಿಟ್ಟಿನಲ್ಲಿ ಮಕ್ಕಳಿಗೆ ‘ವನ ದರ್ಶನ’ ದಂತಹ ಕಾರ್ಯಕ್ರಮಗಳನ್ನು ಸರಕಾರ ಪರಿಣಾಮಕಾರಿಯಾಗಿ ರೂಪಿಸಬೇಕು. ಇದರಿಂದ ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಕಾಳಜಿ ಮೂಡಲು ಪೂರಕ ವಾತಾವರಣ ಸೃಷ್ಟಿ ಮಾಡಿದಂತಾಗುತ್ತದೆ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅಭಿಮತ ವ್ಯಕ್ತಪಡಿಸಿದರು.
ನಗರದ ಫೀ.ಮಾ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ಅರಣ್ಯ ಇಲಾಖೆ, ಮಡಿಕೇರಿ ವನ್ಯಜೀವಿ ವಿಭಾಗದ ವತಿಯಿಂದ ‘ಸಹಬಾಳ್ವೆ ಯಿಂದ ವನ್ಯಜೀವಿಗಳ ಸಂರಕ್ಷಣೆ’ ಘೋಷವಾಕ್ಯದಲ್ಲಿ ನಡೆದ ೭೦ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿಯ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ವನ್ಯಜೀವಿ ಪಾತ್ರದ ಕುರಿತು ಸಾಮಾನ್ಯ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಪ್ತಾಹ ಕೈಗೊಂಡಿರುವುದು ಶ್ಲಾಘನೀಯ. ಪ್ರಕೃತಿ ಮತ್ತು ವನ್ಯಜೀವಿ ಉಳಿಸುವ ನಿಟ್ಟಿನಲ್ಲಿ ರಾಜ್ಯದ ಅರಣ್ಯ ಇಲಾಖೆ ಸೇವೆ ಅವಿಸ್ಮರಣೀಯ. ವನ್ಯಜೀವಿ-ಮಾನವ ಸಂಘರ್ಷ ತಡೆಗೆ ವೈಜ್ಞಾನಿಕ ಚಿಂತನೆಯಡಿ ಬಗೆಹರಿಸಲು ಅರಣ್ಯ ಇಲಾಖೆ ಕಾಳಜಿ ವಹಿಸಿದೆ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ವನ್ಯಜೀವಿ ಬಾಧಿತ ಪ್ರದೇಶಗಳ ಜನಪ್ರತಿನಿಧಿಗಳು, ಅರಣ್ಯ ಅಧಿಕಾರಿ ಗಳು, ತಜ್ಞರು ವಿಚಾರ ಸಂಕಿರಣದ ಮೂಲಕ ವೈಜ್ಞಾನಿಕ ಪರಿಹಾರ ಹುಡುಕಲು ಕಾರ್ಯೋನ್ಮುಖ ಗೊಂಡಿರುವುದು ಉತ್ತಮ ಬೆಳವಣಿಗೆ ಎಂದರು.
ಫೀ.ಮಾ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ. ಮೇ. ಡಾ. ಬಿ. ರಾಘವ ಮಾತನಾಡಿ, ಭವಿಷ್ಯ ಉತ್ತಮವಾಗಿರ ಬೇಕಾದರೆ ಪರಿಸರ ಸಂರಕ್ಷಣೆ ಅತ್ಯಗತ್ಯ. ಅಧುನಿಕತೆ ಭರಾಟೆಯಲ್ಲಿ ಸಸ್ಯ ಸಂಪತ್ತು ನಾಶವಾಗಿ ಕಾಂಕ್ರಿಟ್ ಕಾಡಾಗಿ ನಾಡು ಪರಿವರ್ತನೆಯಾ ಗುತ್ತಿದೆ. ತೋಟಗಳ ಮಧ್ಯೆ ಗಿಡ, ಮರ ಬೆಳಸುವ ಕೆಲಸವಾಗಬೇಕು. ಮಾನವನ ದುರಾಸೆಗೆ ಅರಣ್ಯ ಸಂಪತ್ತು ನಾಶವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಭಾಸ್ಕರ್ ಮಾತನಾಡಿ, ಪ್ರಕೃತಿ ಸರಪಳಿ ಹಾಳಾದರೆ ವ್ಯವಸ್ಥೆ ಬುಡಮೇಲಾಗು ತ್ತದೆ. ಅಧುನಿಕತೆಯ ನಡುವೆ ಪರಿಸರ ಸಂರಕ್ಷಣೆ ಆದ್ಯ ಕರ್ತವ್ಯವಾಗಿದೆ. ಪ್ರಪಂಚದಲ್ಲಿ ೩೦೦ ಮಿಲಿಯನ್ ಜನ ಕಾಡಿನಲ್ಲಿ ಇಂದಿಗೂ ವಾಸಿಸುತ್ತಿದ್ದಾರೆ. ೧.೭೦ ಲಕ್ಷ ಅರಣ್ಯ ಅವಲಂಭಿತ ಗ್ರಾಮಗಳಿವೆ. ಪರಿಸರ ಸಂರಕ್ಷಣೆ ಮಾಡುವುದು ಆಯಾ ರಾಜ್ಯದ ಜವಾಬ್ದಾರಿ ಹಾಗೂ ಪರಿಸರ ವನ್ಯಜೀವಿ ಸಂರಕ್ಷಣೆ ಜನರ ಆದ್ಯ ಕರ್ತವ್ಯ ಎಂದು ಸಂವಿಧಾನದಲ್ಲಿಯೂ ಹೇಳಲಾಗಿದೆ. ಅರಣ್ಯ, ವನ್ಯಜೀವಿ ಸಂರಕ್ಷಣೆಗೆ ಕಾನೂನು, ಕಾಯಿದೆ ರೂಪಿಸಿದ ಪರಿಣಾಮ ಪರಿಸರ ಉಳಿದಿದೆ ಎಂದು ವ್ಯಾಖ್ಯಾನಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ನಾಯಕ್ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ಭಾಸ್ಕರ್, ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ನೆಹರು, ಸೋಮವಾರಪೇಟೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ಕರ್ನಾಟಕ ನೇಚರ್, ವೈಲ್ಡ್ ಲೈಫ್ ಕನ್ಸರ್ವೇಷನ್ ಟ್ರಸ್ಟ್ ಅಧ್ಯಕ್ಷ ಕೆ.ಎಂ. ರವಿಚಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.
ಸನ್ಮಾನ - ಬಹುಮಾನ ವಿತರಣೆ
ಪರಿಸರ ಉಳಿವಿಗೆ ಶ್ರಮಿಸುತ್ತಿರು ವವರು ಹಾಗೂ ಅರಣ್ಯ ಇಲಾಖೆ ಯಲ್ಲಿ ನಿಸ್ವಾರ್ಥ ಸೇವೆಗೈಯುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.
ಅರಣ್ಯ ಇಲಾಖೆಯ ತಲಕಾವೇರಿ ವನ್ಯಜೀವಿ ವಿಭಾಗದ ಎಸ್.ಎಸ್. ಪ್ರಕಾಶ್, ಪುಷ್ಪಗಿರಿ ವನ್ಯಜೀವಿ ವಿಭಾಗದ ಹೆಚ್.ಬಿ. ರಾಜೇಶ್, ಶ್ರೀಮಂಗಲ ವನ್ಯಜೀವಿ ವಿಭಾಗದ ಪಿ.ಎಸ್. ಪಿಂಟೋ, ಬ್ರಹ್ಮಗಿರಿ ವನ್ಯಜೀವಿ ವಲಯದ ಮೊಣಪ್ಪ ಬಿ.ಬಿ ಸೇರಿದಂತೆ ಪರಿಸರ ಮತ್ತು ಅರಣ್ಯ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ಮೈಸೂರಿನ ನೇಚರ್, ವೈಲ್ಡ್ ಲೈಫ್ ಕನ್ಸರ್ವೇಷನ್ ಟ್ರಸ್ಟ್ ಅಧ್ಯಕ್ಷ ಕೆ. ಎಂ. ರವಿಚಂದ್ರ, ಪರಿಸರ ಪ್ರೇಮಿ, ಪತ್ರಕರ್ತ ಸುಧೀರ್ ಹೊದೆಟ್ಟಿ ಅವರುಗಳನ್ನು ಸನ್ಮಾನಿಸಲಾಯಿತು.
ಸಪ್ತಾಹದ ಅಂಗವಾಗಿ ಆಯೋ ಜಿಸಿದ್ದ ಸ್ಪರ್ಧಾ ವಿಜೇತರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ರೇವತಿ ಶ್ರೀನಿವಾಸ್ (ಪ್ರ), ಅಕ್ಷತ (ದ್ವಿ), ವರುಣ್ ಹಾಗೂ ದೇವಯ್ಯ (ತೃ), ಚಿತ್ರಕಲಾ ಸ್ಪರ್ಧೆಯಲ್ಲಿ ತೇಜಸ್ (ಪ್ರ), ಅಮೃತ ಜಯನ್ (ದ್ವಿ), ತೇಜಸ್ವಿನ್ (ತೃ), ಛಾಯಾಚಿತ್ರ ಸ್ಪರ್ಧೆಯಲ್ಲಿ ದೃಶ್ಯ (ಪ್ರ), ಬಿ.ಎಸ್. ಕುಸಮಾ (ದ್ವಿ), ಹಿಮಾಮ್ (ತೃ) ಅವರು ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಸ್ವಪ್ನ, ಚೋಂದಮ್ಮ ಪ್ರಾರ್ಥಿಸಿ, ಕೆ. ನೆಹರು ಸ್ವಾಗತಿಸಿ, ಮರಿಸ್ವಾಮಿ ನಿರೂಪಿಸಿ, ಶ್ರೀನಿವಾಸ್ ನಾಯಕ್ ವಂದಿಸಿದರು.