ಮಡಿಕೇರಿ, ಅ. ೯: ವಿಶ್ವ ಹಿಂದೂ ಪರಿಷತ್, ಭಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಮಡಿಕೇರಿ ತಾಲೂಕು ಮತ್ತು ಗ್ರಾಮಾಂತರ ಪ್ರಖಂಡದ ವತಿಯಿಂದ ಮರಗೋಡು ಶಿವಪಾರ್ವತಿ ದೇವಾಲಯದಲ್ಲಿ ದುರ್ಗಾಪೂಜೆ ಹಾಗೂ ಗೋಪೂಜೆ ಶ್ರದ್ಧಾಭಕ್ತಿಯಿಂದ ಜರುಗಿತು.

ದೇವಾಲಯದÀಲ್ಲಿ ದುರ್ಗಾಪೂಜೆಯ ಮೂಲಕ ನಾಡಿನ ಒಳಿತಿಗಾಗಿ ದುರ್ಗೆಯನ್ನು ಪ್ರಾರ್ಥಿಸಲಾಯಿತು. ಗೋವು ಮತ್ತು ಕರುವಿಗೆ ವಿಶೇಷ ಪೂಜೆ ಸಲ್ಲಿಸಿ ಬೆಲ್ಲ, ಕಡಲೆ, ಬಾಳೆಹಣ್ಣು, ಅವಲಕ್ಕಿ ಫಲಹಾರ ನೀಡಿ ಗೌರವಿಸಲಾಯಿತು.

ನಂತರ ದೇವಾಲಯದ ಸಭಾಂಗಣದಲ್ಲಿ ದುರ್ಗಾಸ್ತೋತ್ರದೊಂದಿಗೆ ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಜಿಲ್ಲಾ ಮಠ, ಮಂದಿರಗಳ ಪ್ರಮುಖ್ ಡಾ.ಮಹಾಭಲೇಶ್ವರ ಭಟ್ ಬೌದಿಕ್ ನಡೆಸಿಕೊಟ್ಟು ಹಿಂದೂ ಧರ್ಮ, ಧಾರ್ಮಿಕ ಆಚರಣೆ, ದುರ್ಗಾಪೂಜೆ ಮತ್ತು ಗೋಪೂಜೆಯ ಮಹತ್ವವನ್ನು ತಿಳಿಸಿದರು. ಮಾತೃಶಕ್ತಿಯ ಮಡಿಕೇರಿ ತಾಲೂಕು ಸಂಯೋಜಕಿ ಮಮತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹ ಪ್ರಮುಖ್ ಪೂರ್ಣಿಮ ಸುರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಸಂಯೋಜಕಿ ಉಮಾವತಿ, ರೋಹಿಣಿ ಚಂದ್ರಶೇಖರ್, ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಜಿಲ್ಲಾ ಪ್ರಸಾರ ಪ್ರಮುಖ್ ಶಾನ್ ಸೋಮಣ್ಣ, ಶಿವಪಾರ್ವತಿ ದೇವಾಲಯದ ಮುಖ್ಯಸ್ಥರು, ಗ್ರಾಮಸ್ಥರು, ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು. ಜಿಲ್ಲಾ ಕಾರ್ಯದರ್ಶಿ ರಮೇಶ್ ಪುದಿಯೊಕ್ಕಡ ಸ್ವಾಗತಿಸಿ, ನಿರೂಪಿಸಿ, ಚಂದ್ರಶೇಖರ್ ವಂದಿಸಿದರು.