ಶನಿವಾರಸಂತೆ, ಅ. ೯ : ಹಿರಿಯ ಸಹಕಾರಿಗಳ ಮಾರ್ಗದರ್ಶನದಲ್ಲಿ ಕಿರಿಯ ಸಹಕಾರಿಗಳು ನಡೆದರೆ ಆ ಸಹಕಾರ ಸಂಘ ಅಭಿವೃದ್ಧಿ ಹೊಂದುತ್ತವೆ. ರಾಜಕೀಯ ರಹಿತ ನಡೆ ಅನುಸರಿಸಿದ ಕಾರಣ ಜಿಲ್ಲೆಯಲ್ಲಿ ಸಹಕಾರದಲ್ಲಿ ಸಮೃದ್ಧವಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಮೃತ ಮಹೋತ್ಸವದ ಸವಿನೆನಪಿಗಾಗಿ ನಿರ್ಮಿಸಲಾಗಿರುವ ನೂತನ ವಾಣಿಜ್ಯ ಸಂಕೀರ್ಣದ ೬ ಮಳಿಗೆಗಳನ್ನು ಉದ್ಘಾಟಿಸಿದ ಅವರು, ನಂತರ ಸ್ಥಳೀಯ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೊಡಗಿನಲ್ಲಿ ಮಾತ್ರ ರಾಜಕೀಯ ರಹಿತವಾಗಿ ಸಹಕಾರ ಸಂಘಗಳು ಬೆಳೆಯುತ್ತಿದ್ದು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿವೆ.

(ಮೊದಲ ಪುಟದಿಂದ) ಕಾನೂನು ಮೀರದೆ, ನಡೆಯುವ ದಾರಿಯಲ್ಲಿ ಪ್ರಮಾಣಿಕತೆ ಇರಬೇಕು. ೭೫ ವರ್ಷಗಳ ಇತಿಹಾಸ ಹೊಂದಿರುವ ನೆನಪಿಗಾಗಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದ್ದು ನಂಬಿ ಬರುವ ಸಹಕಾರಿಗಳ, ರೈತರ ಸಮಸ್ಯೆಗಳಿಗೆ ಸಂಘ ಸ್ಪಂದಿಸಬೇಕು. ರೈತರ ದಾಖಲೆಗಳು ಸರಿಯಾಗಿದ್ದರೇ ಮಾತ್ರ ಸಹಕಾರ ನೀಡಲು ಸಾಧ್ಯ. ಸಮಾರಂಭ ಮಾಡಿದರೆ ಸಾಲದು ನೆನಪಿಗಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು. ಸರ್ಕಾರವನ್ನೆ ನಂಬಿ ಕೂರದೆ ಮಾಡುವ ಕೆಲಸದಲ್ಲಿ ಶ್ರದ್ಧೆ ತೋರಬೇಕು ಎಂದು ನೀಡಿದರು.

ಮುಖ್ಯ ಅತಿಥಿ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ದೇಶ ಸ್ವಾತಂತ್ರö್ಯ ಗಳಿಸುವಲ್ಲಿ ಸಹಕಾರಿ ಸಂಘಗಳ ಹೋರಾಟವೂ ಮುಖ್ಯವಾಗಿದೆ. ಸಹಕಾರಿಗಳ ಸಹಕಾರದಿಂದ ಸಂಘ ಬೆಳೆಯುತ್ತದೆ. ವ್ಯವಹಾರ ಚೆನ್ನಾಗಿದ್ದರೇ ಮಾತ್ರ ಆ ಸಂಘಗಳು ಅಭಿವೃದ್ಧಿ ಹೊಂದುತ್ತವೆ. ಎಲ್ಲಾ ರೀತಿಯ ಸಾಲ ಸೌಲಭ್ಯಗಳು ಇದ್ದು ರೈತರಿಗೆ ಮಾಹಿತಿ ನೀಡಬೇಕು. ಉತ್ತಮ ಚಿಂತನೆಗಳ ಮೂಲಕ ಸಹಕಾರ ಸಂಘಗಳು ಬೆಳೆಯಬೇಕು. ಸಂಘಗಳ ಅಧ್ಯಕ್ಷರು ದಕ್ಷವಾಗಿರಬೇಕು. ಕೊಡಗಿನ ಸಹಕಾರ ಸಂಘಗಳು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದು ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವವರಿಗೂ ಸಾಲ ಸೌಲಭ್ಯ ಕೊಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರುಗಳಾದ ಎಸ್.ಸಿ.ಶರತ್ ಶೇಖರ್, ಶರವಣಕುಮಾರ್, ಜಲಜಾ ಶೇಖರ್, ಉಮೇಶ್ ಉತ್ತಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಪಿ. ಶಿವರಾಜ್, ಗುತ್ತಿಗೆದಾರ ವಿನೋದ್ ಹಾಗೂ ಇಂಜಿನಿಯರ್ ಪರಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಜಿ.ಜಿ. ಪರಮೇಶ್ ಮಾತನಾಡಿದರು .ನಿರ್ದೇಶಕ ಡಿ.ಬಿ. ಧರ್ಮಪ್ಪ ಪ್ರಾಸ್ತಾವಿಕ ನುಡಿಯಾಡಿದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಶೈಲಜಾ, ಸಹಕಾರ ಸಂಘದ ಉಪಾಧ್ಯಕ್ಷ ಬಿ.ಎಸ್. ಮಂಜುನಾಥ್, ನಿರ್ದೇಶಕರಾದ ಎಸ್.ಸಿ. ಶರತ್ ಶೇಖರ್, ಡಿ.ಬಿ. ಧರ್ಮಪ್ಪ, ಎಚ್.ವಿ. ಮಹಾಂತಪ್ಪ, ಎಚ್.ಸಿ. ದೀಪಕ್, ಗಿರಿಜಾ ಕರುಣಾಕರ್, ದೇವಾಂಬಿಕಾ ಮಹೇಶ್, ಜಿ.ಬಿ. ಪರಮೇಶ್, ಎಸ್.ಜೆ. ರವಿಕುಮಾರ್, ಎಸ್.ಎಸ್. ಸಾಗರ್, ಕುಮಾರ್ ನಾಯಕ್, ರಾಮಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಜ್, ಸಿಬ್ಬಂದಿ ಬಿ.ಆರ್. ಹರೀಶ್, ಕೆ.ಸಿ. ಕಿರಣ್, ಎಚ್.ಎಂ. ವಿರೂಪಾಕ್ಷಾ, ಕೆ.ಸಿ. ಜಗದೀಶ್, ವಿಘ್ನೇಶ್ವರ ವಿದ್ಯಾಸಂಸ್ಥೆ ಶಿಕ್ಷಕ ಕೆ.ಪಿ. ಜಯಕುಮಾರ್, ಪ್ರಮುಖರಾದ ಕೆ.ವಿ. ಮಂಜುನಾಥ್, ಎಸ್.ಕೆ. ವೀರಪ್ಪ, ಜೆ.ಸಿ. ಶೇಖರ್, ಎಚ್.ಎಸ್. ಸುಬ್ಬಪ್ಪ, ಸಂಗಯ್ಯ, ಬಿ.ಕೆ. ಚಿಣ್ಣಪ್ಪ, ಡಿ.ಬಿ. ಸತೀಶ್ ಇತರರು ಉಪಸ್ಥಿತರಿದ್ದರು. ಗಾನವಿ ಹಾಗೂ ಗಾನವಿ ಆಚಾರ್ಯ ಪ್ರಾರ್ಥಿಸಿದರು. ಶರತ್ ಶೇಖರ್ ಸ್ವಾಗತಿಸಿದರು. ಶಿಕ್ಷಕ ಜಯಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.