ಕಣಿವೆ, ಅ. ೯: ಐಟಿಡಿಪಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ನಿರ್ಲಕ್ಷö್ಯದಿಂದಾಗಿ ಜೇನು ಕುರುಬ ಜನಾಂಗಕ್ಕೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಜೇನು ಕುರುಬರ ಮುಖಂಡ ಹಾಗೂ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯ ಆರ್.ಕೆ. ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು. ಕುಶಾಲನಗರ ತಾಲೂಕು ಚಿಕ್ಲಿಹೊಳೆ ಜಲಾಶಯದ ಬಳಿ ಇರುವ ಕಟ್ಟೆಹಾಡಿಯಲ್ಲಿ ಆಯೋಜಿಸಿದ್ದ ಗ್ರಾಮ ಅರಣ್ಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜೇನು ಕುರುಬರ ಹೆಸರಿನಲ್ಲಿ ಉಳ್ಳವರು ಹಾಗೂ ಜೇನು ಕುರುಬರಲ್ಲದವರು ಜಾತಿ ಪ್ರಮಾಣ ಪತ್ರಗಳನ್ನು ಮಾಡಿಸಿಕೊಂಡು ನಿಜವಾದ ಅರ್ಹ ಫಲಾನುಭವಿಗಳಿಗೆ ವಂಚಿಸುತ್ತಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮೀಸಲಿಡುವ ಪರಿಶಿಷ್ಟರ ಅನುದಾನದ ಶೇ. ೨೫ ರಷ್ಟು ಹಣ ನಮ್ಮ ಜೇನು ಕುರುಬರಿಗೆ ಸಲ್ಲಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮ ನಮ್ಮ ಸಮುದಾಯಕ್ಕೆ ಮಾರಕವಾಗಿದೆ. ನಮಗೆ ಯಾವೊಂದು ಅಭಿವೃದ್ಧಿ ಯೋಜನೆಗಳೂ ಆಗಲಿಲ್ಲ. ಹಾಗಾಗಿ ನಮಗೆ ವಾಲ್ಮೀಕಿ ನಿಗಮ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೇನು ಕುರುಬರಿಗಾಗಿ ಸರ್ಕಾರ ನೀಡುವ ರೂ. ೫ ಲಕ್ಷ ಮನೆ ನಿರ್ಮಾಣದ ಹಣ ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಪಂಚಾಯಿತಿ ಪಿಡಿಓಗಳು ಮುಂದಾಗಬೇಕು ಎಂದರು.
ಜೇನು ಕುರುಬರ ಅಭಿವೃದ್ಧಿ ಸಂಘದ ಅಧ್ಯಕ್ಷ ಮಾವಿನಹಳ್ಳ ಹಾಡಿಯ ಜೆ.ಟಿ. ಕಾಳಿಂಗ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದರೂ ನಮ್ಮ ಕಾಡುಜನರಿಗೆ ಸರ್ಕಾರದ ಸೌಲಭ್ಯಗಳು ದೊರಕುತ್ತಿಲ್ಲ.
ಇದುವರೆಗೂ ನಮ್ಮ ಹಾಡಿಗಳಲ್ಲಿ ಜೇನುಕುರುಬ ಮಂದಿ ವಾಸಿಸುತ್ತಿರುವ ಗುಡಿಸಲುಗಳಲ್ಲಿ ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲ ಎಂದು ಜಾಗೃತರಾಗುವ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುವ ಉದ್ದೇಶದಿಂದಲೇ ಗ್ರಾಮ ಅರಣ್ಯ ಸಮಿತಿ ರಚನೆ ಯಾಗಿದೆ. ಅದರಡಿ ಅಧಿಕಾರಿಗಳು ಕಾರ್ಯ ನಿರ್ವಹಿಸುವ ಕಾರಣ ಜೇನು ಕುರುಬರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಗಮನ ಕೊಡಬೇಕು. ಸರ್ಕಾರ ಜೇನು ಕುರುಬರು ಹಾಗೂ ಹಿಂದುಳಿದವರಿಗೆAದೇ ವಿವಿಧ ಶಾಲೆಗಳು ಹಾಗೂ ವಸತಿ ನಿಲಯಗಳನ್ನು ತೆರೆದಿದ್ದು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಯಡವನಾಡು ಹಾಡಿಯ ಮುಖಂಡ ನಂಜಣ್ಣ, ಮಾವಿನಹಳ್ಳ ಜೇನುಕುರುಬರ ಹಾಡಿಯ ಯಜಮಾನ ಪುಟ್ಟ, ಗೋಪಾಲ, ಸಜ್ಜಳ್ಳಿ ಹಾಡಿಯ ಮುಖಂಡ ವಿಶ್ವ ಇದ್ದರು.
ಇದೇ ಸಂದರ್ಭ ಸಭೆಯಲ್ಲಿ ಅರಣ್ಯ ಹಕ್ಕು ಸಮಿತಿಯನ್ನು ರಚಿಸಲಾಯಿತು. ಮಾವಿನಹಳ್ಳ ಹಾಡಿ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರಾಗಿ ಜೆ.ಆರ್. ಗೋಪಾಲ, ಉಪಾಧ್ಯಕ್ಷರಾಗಿ ಜೆ.ಎಂ. ಸರ್ವಮಂಗಳ, ಕಾರ್ಯದರ್ಶಿಯಾಗಿ ಜೆ.ಎಸ್. ಪಾಪಣ್ಣ, ಕಟ್ಟೆಹಾಡಿ ಸಮಿತಿಯ ಅಧ್ಯಕ್ಷರಾಗಿ ಅಪ್ಪು, ಉಪಾಧ್ಯಕ್ಷರಾಗಿ ಗೌರಿ, ಕಾರ್ಯದರ್ಶಿಯಾಗಿ ಚಂದ್ರಿಕಾ ಅವರನ್ನು ನೇಮಕ ಮಾಡಲಾಯಿತು.