ಮಡಿಕೇರಿ, ಅ. ೯: ಕೊಡವ ಕ್ರಿಕೆಟ್ ಅಕಾಡೆಮಿ ವತಿಯಿಂದ ಎರಡನೇ ವರ್ಷದ ಅಂತರ ಕೊಡವ ಸಮಾಜ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸ ಲಾಗಿದೆ. ಈ ಬಾರಿ ಅಕ್ಟೋಬರ್ ೩೧ ರಿಂದ ಬಾಳೆಲೆಯ ವಿಜಯಲಕ್ಷಿö್ಮ ಜೂನಿಯರ್ ಕಾಲೇಜು ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ನವೆಂಬರ್ ೪ರ ತನಕ ಜರುಗಲಿದೆ. ನಗರದಲ್ಲಿಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಡವ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾದ ಕೀತಿಯಂಡ ಕಾರ್ಸನ್ ಕಾರ್ಯಪ್ಪ, ಉಪಾಧ್ಯಕ್ಷ ಚೇರಂಡ ಕಿಶನ್, ಕಾರ್ಯದರ್ಶಿ ಕುಂಡ್ರAಡ ಬೋಪಣ್ಣ ಹಾಗೂ ಖಜಾಂಚಿ ಕೊಕ್ಕೇಂಗಡ ರಂಜನ್ ಅವರುಗಳು ಈ ಬಗ್ಗೆ ಮಾಹಿತಿ ನೀಡಿದರು.

ಕಳೆದ ವರ್ಷ ವೀರಾಜಪೇಟೆಯಲ್ಲಿ ಯಶಸ್ವಿಯಾಗಿ ಈ ಪಂದ್ಯಾವಳಿಯನ್ನು ನಡೆಸಲಾಗಿತ್ತು. ೧೦ ಕೊಡವ ಸಮಾಜಗಳ ತಂಡಗಳು ಕಳೆದ ವರ್ಷ ಭಾಗವಹಿಸಿದ್ದವು. ಈ ವರ್ಷ ೧೨ ರಿಂದ ೧೪ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟಗಳನ್ನು ನಡೆಸಲಾಗುತ್ತಿದೆ. ಇದರಿಂದ ಜಿಲ್ಲೆಯ ಯುವ ಕ್ರಿಕೆಟಿಗರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜಿಲ್ಲೆಯ ಯುವ ಪ್ರತಿಭೆಯನ್ನು ಪ್ರೋತ್ಸಾಹಿಸಲು ಕಳೆದ ವರ್ಷದಿಂದ ಲೆದರ್‌ಬಾಲ್ ಪಂದ್ಯಾವಳಿಯನ್ನು ಆಯೋಜಿಸುತ್ತಾ ಬರುತ್ತಿದ್ದೇವೆ. ಈ ಪಂದ್ಯಾವಳಿಯಲ್ಲಿ ಕೊಡವ ಜನಾಂಗದ ಆಟಗಾರರಿಗೆ ಮಾತ್ರ ಅವಕಾಶವಿರುತ್ತದೆ. ಒಂದು ತಂಡಕ್ಕೆ ಎರಡು ಕೊಡವ ಆಟಗಾರರನ್ನು ಹೊರ ಜಿಲ್ಲೆಯಿಂದ ಕರೆಸಿಕೊಳ್ಳಬಹುದು. ಬಾಕಿ ಆಟಗಾರರು ಕೊಡಗಿನ ಆಧಾರ್ ಕಾರ್ಡ್ ಹೊಂದಿರಬೇಕು ಹಾಗೂ ಕಡ್ಡಾಯವಾಗಿ ಹಾಜರು ಪಡಿಸಬೇಕಾಗಿದೆ. ಇಬ್ಬರು ಅತಿಥಿ ಆಟಗಾರರೂ ಕೊಡವರಾಗಿದ್ದು ಹೊರಜಿಲ್ಲೆಯ ಆಧಾರ್ ಕಾರ್ಡ್ ಅನ್ನು ಪರಿಗಣಿಸಲಾಗುವುದು.

ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವುದು. ಈ ಪಂದ್ಯಾವಳಿ ನಾಕೌಟ್ ಮಾದರಿಯಲ್ಲಿ ನಡೆಯುತ್ತದೆ ಎಂದು ಪ್ರಮುಖರು ತಿಳಿಸಿದರು.

ಎಲ್ಲಾ ೧೫ ಆಟಗಾರರ ಹೆಸರುಗಳನ್ನು ಆಧಾರ್ ಕಾರ್ಡ್ನೊಂದಿಗೆ ಆಟ ಪ್ರಾರಂಭವಾಗುವ ಮೊದಲು ಆಯೋಜಕರಿಗೆ ತಲುಪಿಸಬೇಕು. ಆಧಾರ್ ಕಾರ್ಡ್ ಇಲ್ಲದ ಆಟಗಾರರನ್ನು ಆಡಿಸುವಂತಿಲ್ಲ. ನೊಂದಣಿ ಮಾಡಿದ ಆಟಗಾರರನ್ನೇ ಮುಂದಿನ ಸುತ್ತಿಗೆ ಆಡಿಸಬೇಕು ಹೊಸ ಆಟಗಾರರನ್ನು ಆಡಿಸುವಂತಿಲ್ಲ. ತಾ. ೨೦ ರೊಳಗೆ ಆಡುವ ತಂಡಗಳ ಹೆಸರು ನೋಂದಣಿ ಮಾಡಿಕೊಳ್ಳಬೇಕಿದೆ.

ಕೊಡಗು ಜಿಲ್ಲೆಯ ಎಲ್ಲಾ ಕೊಡವ ಸಮಾಜಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಬೇಕೆಂದು ಹಾಗೂ ಕೊಡಗಿನ ಎಲ್ಲಾ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಾವಳಿಯ ಯಶಸ್ಸಿಗೆ ಸಹಕರಿಸುವಂತೆ ಅವರು ಕೋರಿದರು.

ಹೆಚ್ಚಿನ ಮಾಹಿತಿ ಹಾಗೂ ತಂಡದ ನೋಂದಣಿ ಮಾಡಲು ಮೊಬೈಲ್ ನಂಬರ್ ೯೩೪೩೮೫೬೮೭೭, ೯೬೩೨೦೮೫೫೩೬, ೯೩೫೩೩೦೪೦೪೨ ಅನ್ನು ಸಂಪರ್ಕಿಸಬಹುದಾಗಿದೆ.