ಚೆಯ್ಯಂಡಾಣೆ, ಅ. ೮: ಕ್ಷೇತ್ರದಲ್ಲಿ ನಡೆಯುವ ಎಲ್ಲಾ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿ ಉತ್ತಮ ಪಡಿಸುವುದು ಆಯಾ ಗ್ರಾಮಸ್ಥರ, ಸ್ಥಳೀಯ ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಹಲವು ವರ್ಷಗಳಿಂದ ಅಭಿವೃದ್ಧಿ ಕಾಮಗಾರಿ ಕಾಣದೆ ಗ್ರಾಮಸ್ಥರ ಬೇಡಿಕೆಯಾಗಿದ್ದ ನಾಪೋಕ್ಲು ಗ್ರಾಮ ಪಂಚಾಯಿತಿಯ ಕೊಳಕೇರಿ ಹಾಗೂ ನರಿಯಂದಡ ಗ್ರಾಮ ಪಂಚಾಯಿತಿಯ ಕೋಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಸರ್ಕಾರದ ವಿವಿಧ ಇಲಾಖೆಗಳ ಅನುದಾನದಿಂದ ರೂ. ೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರದ ಎಲ್ಲಾ ಭಾಗಗಳಲ್ಲೂ ಗುಣಮಟ್ಟದ ರಸ್ತೆ ಆಗಬೇಕು. ಉತ್ತಮ ಗುಣಮಟ್ಟದ ಕಾಮಗಾರಿ ನಡೆಯುವಂತೆ ಗ್ರಾಮಸ್ಥರು ಸ್ಥಳೀಯ ಜನಪ್ರತಿನಿಧಿಗಳು ನಿಗಾವಹಿಸಬೇಕು. ಈ ರಸ್ತೆಯ ಮತ್ತೊಂದು ಭಾಗದಲ್ಲಿ ರೂ. ೧೦ ಲಕ್ಷ ಅನುದಾನದಲ್ಲಿ ಗುತ್ತಿಗೆದಾರರು ಕಾಮಗಾರಿ ಸರಿಯಾಗಿ ಮಾಡಿಲ್ಲ ಎಂಬ ದೂರು ಬಂದಿದ್ದು ಗುತ್ತಿಗೆದಾರರು ಕಾಂಕ್ರೀಟ್ ರಸ್ತೆ ನಿರ್ಮಿಸುವಂತೆ ಒಪ್ಪಿಕೊಂಡಿದ್ದಾರೆ. ಕಾಮಗಾರಿಯಲ್ಲಿ ಕಳಪೆ ಕಂಡು ಬಂದರೆ ಯಾವುದೇ ಕಾರಣಕ್ಕೂ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದರು.
೨೦೦೩ ರ ನಂತರ ಈ ರಸ್ತೆ ಕಾಮಗಾರಿ ನಡೆದಿಲ್ಲ ೨೨ ವರ್ಷಗಳಿಂದ ವಾಟ್ಸಾö್ಯಪ್ನಲ್ಲಿ ಜಾಲತಾಣದಲ್ಲಿ ಚರ್ಚೆ ಇರಲಿಲ್ಲ. ಇದೀಗ ರಸ್ತೆ ಕಾಮಗಾರಿ ನಡೆದ ಬಳಿಕ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂಬ ಚೆರ್ಚೆಯಾಗಿದೆ. ಕ್ಷೇತ್ರದಲ್ಲಿ ಗುಣಮಟ್ಟದ ರಸ್ತೆ ಮಾಡಲು ಪ್ರಾಮಾಣಿಕವಾಗಿ ನಾನು ಪ್ರಯತ್ನ ಮಾಡುತ್ತಿದ್ದೇನೆ. ಸಣ್ಣ ವಿಚಾರವನ್ನು ತೆಗೆದು ಬೆರಳು ತೋರಿಸುವ ಕೆಲಸ ಮಾಡದಿರಿ ಎಂದು ಶಾಸಕ ಪೊನ್ನಣ್ಣ ತೀಕ್ಷ÷್ಣವಾಗಿ ನುಡಿದರು.
ಈ ಸಂದರ್ಭ ಗ್ರಾಮಸ್ಥರ ಪರವಾಗಿ ಕೋಕೇರಿ ಗ್ರಾಮಸ್ಥ ಚೇನಂಡ ಜೆಪ್ಪು ದೇವಯ್ಯ ಮಾತನಾಡಿ, ಕೋಕೇರಿ, ಕೊಳಕೇರಿ ಗ್ರಾಮಸ್ಥರು ಕಳೆದ ೨೫ ವರ್ಷಗಳಿಂದ ಕಾಣುತ್ತಿದ್ದ ಕನಸು ಇಂದು ನನಸಾಗುತ್ತಿದೆ ಎಂದರು. ಈ ರಸ್ತೆಯಲ್ಲಿ ೭ಕ್ಕೂ ಅಧಿಕ ಶಾಲಾ ಬಸ್ ಹಾಗೂ ಒಂದು ಖಾಸಗಿ ಬಸ್ ಸಂಚರಿಸುತ್ತಿದೆ. ಇದಕ್ಕೆ ಮುಕ್ತಿ ದೊರಕಿದ್ದು ನಮ್ಮ ಭಾಗ್ಯ ಇದಕ್ಕೆ ಪೊನ್ನಣ್ಣ ಮುಖ್ಯ ಕಾರಣ ಯಾವುದೇ ಜಾತಿ,ಮತ,ಭೇದವಿಲ್ಲದೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಬೇಕೆಂದರು.
ಈ ಸಂದರ್ಭ ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಉಪಾಧ್ಯಕ್ಷೆ ಹೇಮಾವತಿ, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ನರಿಯಂದಡ ಗ್ರಾ.ಪಂ. ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಕೆ. ಹಾರಿಸ್, ಗಿರೀಶ್ ಪೂಣಚ್ಚ, ಸುರೇಶ್ ನಾಣಯ್ಯ, ಗ್ರಾಮ ಪಂಚಾಯಿತಿ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಹಾಜರಿದ್ದರು.