ಮಡಿಕೇರಿ, ಅ. ೮: ಮಂಜಿನನಗರಿ ಮಡಿಕೇರಿ ಗಾಂಧಿಮೈದಾನದಲ್ಲಿ ಇಂದು ಮಹಿಳೆಯರದ್ದೇ ದರ್ಬಾರ್... ಮೈದಾನದ ಸುತ್ತಮುತ್ತಲಿನಲ್ಲಿ, ಕಲಾಸಂಭ್ರಮ ವೇದಿಕೆಯಲ್ಲಿ ಹತ್ತು - ಹಲವು ವೈವಿಧ್ಯಮಯ ಕಾರ್ಯಕ್ರಮಗಳು, ಚಪ್ಪಾಳೆ, ಶಿಳ್ಳೆ, ಹರ್ಷೋದ್ಘಾರದ ಉತ್ತೇಜನ. ಈ ಮಹಿಳೆಯರನ್ನು ನಿಭಾಯಿಸಲು ಅವರಿಗೆ ರಕ್ಷಣೆ ಕೊಡಲೂ ಮಹಿಳಾ ಪೊಲೀಸರೇ ಕಂಡು ಬಂದದ್ದು ಮತ್ತೊಂದು ವಿಶೇಷ.

ಇವೆಲ್ಲದಕ್ಕೂ ವೇದಿಕೆಯಾಗಿದ್ದು, ಮಡಿಕೇರಿ ದಸರಾ ಅಂಗವಾಗಿ ಏರ್ಪಡಿಸಲಾಗಿದ್ದ ಮಹಿಳಾದ ದಸರಾ... ಸದಾ ಮನೆಕೆಲಸ, ಅಡುಗೆ, ಮಕ್ಕಳ ಲಾಲನೆ - ಪಾಲನೆಯಲ್ಲೇ ತೊಡಗಿಸಿಕೊಳ್ಳುವ ಮಹಿಳೆಯರು ಇಂದು ಸಂಭ್ರಮಿಸಿದರು.

ಮಡಿಕೇರಿ ದಸರಾ ಸಮಿತಿ ಹಾಗೂ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರಸಭಾ ಸದಸ್ಯೆಯರು, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಗಾಂಧಿಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಮಹಿಳಾ ದಸರಾದಲ್ಲಿ ಕಣ್ಣಿಗೆ ಬಟ್ಟೆಕಟ್ಟಿ ಮೇಕಪ್ ಮಾಡುವುದು, ಮೆಹಂದಿ, ಸಾಂಪ್ರದಾಯಿಕ ಉಡುಗೆ, ಬಲೂನ್ ಗ್ಲಾಸ್, ಬಾಂಬ್ ಇನ್ ದ ಸಿಟಿ, ಅಜ್ಜಿ ಜೊತೆ ಮೊಮ್ಮಕ್ಕಳ ನಡಿಗೆ, ಗಾರ್ಭಾ ಡ್ಯಾನ್ಸ್, ವಾಲಗತ್ತಾಟ್, ನಾರಿಗೊಂದು ಸೀೆ್ರ, ಕಪ್ಪೆ ಜಿಗಿತ, ಕೇಶವಿನ್ಯಾಸ, ಒಂಟಿಕಾಲಿನ ಓಟ ಸೇರಿದಂತೆ ವಿವಿಧ ಮನರಂಜನೀಯ ಸ್ಪರ್ಧಾ ಕಾರ್ಯಕ್ರಮಗಳು ಮಹಿಳೆಯರಿಗಾಗಿ ನಡೆದವು. ಎಲ್ಲಾ ಕಾರ್ಯಕ್ರಮಗಳಲ್ಲೂ ಕೂಡ ಮಹಿಳೆಯರು ಪಾಲ್ಗೊಂಡು ರಂಜಿಸಿದರು. ಸಮಾಜ ಸೇವಕಿ ದಿವ್ಯಾ ಮಂತರ್ ಗೌಡ ಮಹಿಳಾ ದಸರಾವನ್ನು ಉದ್ಘಾಟಿಸಿದರು.

‘ಮಹಿಳೆಯರು ಮುಂಚೂಣಿಯಲ್ಲಿದ್ದಾರೆ’

ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಇಂದು ಮುಂಚೂಣಿಯಲ್ಲಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಹೇಳಿದರು. ಮಹಿಳಾ ದಸರಾ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದ ಅವರು ಮಹಿಳೆಯರಲ್ಲಿರುವ ಪ್ರತಿಭೆಗಳ ಪ್ರದರ್ಶನಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಹೇಳಿದ ಅವರು ಗ್ರಾಮೀಣ ಭಾಗದ ಮಹಿಳೆಯರನ್ನು ಕೂಡ ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಳ್ಳುವಂತೆ ಮಾಡಬೇಕೆಂದು ಸಲಹೆಯಿತ್ತರು. ರಾಜ್ಯ ಸರ್ಕಾರದ ಗೃಹಲಕ್ಷಿö್ಮ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ ಎಂದು ಅವರು ಹೇಳಿದರು.

ಮತ್ತೋರ್ವ ಅತಿಥಿ ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಮಾತನಾಡಿ, ಎಲ್ಲಾ ರಂಗದಲ್ಲಿಯೂ ಮಹಿಳೆಯರು ಮುಂದುವರಿಯುತ್ತಿದ್ದು, ಸಂಸತ್, ವಿಧಾನಸಭೆಯಲ್ಲಿಯೂ ಕೂಡ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುವಂತಾಗಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ನಟರಾಜು ಅವರು ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡಿದ್ದಾರೆ. ಮಹಿಳೆಯರಿಗಾಗಿ ಇರುವ ಸರ್ಕಾರಗಳ

(ಮೊದಲ ಪುಟದಿಂದ) ಯೋಜನೆಗಳನ್ನು ಅರ್ಹಫಲಾನುಭವಿಗಳಿಗೆ ಇಲಾಖೆ ಮೂಲಕ ತಲುಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ಎರಡು ತಿಂಗಳ ಹಿಂದಿನವರೆಗೆ ಗೃಹಲಕ್ಷಿö್ಮ ಯೋಜನೆಯಡಿ ೨೪೧ ಕೋಟಿ ೫೫ ಲಕ್ಷದ ೯೦ ಸಾವಿರ ರೂಗಳನ್ನು ಮಹಿಳೆಯರಿಗೆ ನೀಡಲಾಗಿದೆ ಎಂದು ಮಾಹಿತಿಯಿತ್ತರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಮಾತನಾಡಿ, ಮಹಿಳೆಯರಿಗೆ ಸಮಾಜದಲ್ಲಿ ಪೂಜ್ಯ ಸ್ಥಾನವಿದ್ದು, ಮಹಿಳೆಯರಿಗೆ ನೋವುಂಟು ಮಾಡುವ ಕೆಲಸವನ್ನು ಯಾರೂ ಕೂಡ ಮಾಡಬಾರದೆಂದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಕೆ.ಆರ್. ಅನಿಲ, ಎಂ.ಇ. ಲೀಲಾವತಿ, ಕೆ. ಸರೋಜಿನಿ, ಆಶಾ ಕಾರ್ಯಕರ್ತೆಯರಾದ ಎಂ.ಎಲ್. ಬೇಬಿ, ಸುಶೀಲ, ಎಸ್. ಹೆಚ್. ರಾಜೇಶ್ವರಿ, ಪೌರಕಾರ್ಮಿಕರಾದ ಡಿ. ಲಕ್ಷಿö್ಮ, ಮೀನಾಕ್ಷಿ, ಭಾಗ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸೌಮ್ಯ ಇವರುಗಳನ್ನು ಉತ್ತಮ ಸೇವೆಗಾಗಿ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ನಗರಸಭಾ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ, ಮಾಜಿ ಉಪಾಧ್ಯಕ್ಷೆ ಸವಿತಾ ರಾಕೇಶ್, ಮಾಜಿ ಅಧ್ಯಕ್ಷೆ ಜುಲೇಕಾಬಿ, ಮುಡಾ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್, ನಗರಸಭೆ ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಸದಸ್ಯರಾದ ಚಿತ್ರಾವತಿ, ಕಲಾವತಿ, ಮಂಜುಳಾ, ಉಷಾ, ಶ್ವೇತಾ, ಸಬಿತ, ಶಾರದಾ ನಾಗರಾಜ್, ಮುಡಾ ಸದಸ್ಯೆ ಮಿನಾಜ್ ಪ್ರವೀಣ್, ದಸರಾ ವೇದಿಕೆ ಸಮಿತಿ ಅಧ್ಯಕ್ಷೆ ಕನ್ನಂಡ ಕವಿತಾ, ಖಜಾಂಚಿ ಅರುಣ್ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಸಹಾಯಕ ಶಶಿ ಅಭಿವೃದ್ಧಿ ಯೋಜನಾಧಿಕಾರಿ ಸಿ.ಪಿ. ಸವಿತಾ ಮತ್ತಿತರರಿದ್ದರು. ಚಿತ್ರಕಲಾವಿದೆ ಹೇಮಾ ವಿನಾಯಕ್ ಪಾಟೀಲ್ ಅವರನ್ನು ಇದೇ ಸಂದರ್ಭ vಗೌರವಿಸಲಾಯಿತು.

ಎಸ್. ಡಿ. ಅನಿತಾ ನಿರೂಪಿಸಿ, ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಸ್ವಾಗತಿಸಿದರು. ಮಹಿಳಾ ದಸರಾ ಸಂಚಾಲಕಿ ಕುಡೆಕಲ್ ಸವಿತಾ ಸಂತೋಚ್ ವಂದಿಸಿದರು.

ಮಹಿಳಾ ದಸರಾ ಪ್ರಯುಕ್ತ ಸನಾತನ ಸಂಸ್ಥೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ನಗರಸಭೆ, ಮಹಿಳೋದಯ ಮಹಿಳಾ ಒಕ್ಕೂಟ, ನಕ್ಷತ್ರ ನಿರಂತರ ಉಳಿತಾಯ ಗುಂಪು, ಹಾತೂರು ನೇಸರ ರೈತ ಉತ್ಪಾದಕರ ಸಮಿತಿ, ಸ್ಫೂರ್ತಿ ಸ್ವಸಹಾಯ ಸಂಘ, ಸಂಜೀವಿನಿ ಸಂಸ್ಥೆ ಮತ್ತಿತರ ಸಂಘ ಸಂಸ್ಥೆಗಳಿAದ ಜೇನು, ವೈನ್, ಹೂವಿನಗಿಡಗಳು, ಉಡುಪುಗಳು ಸೇರಿದಂತೆ ವಿವಿಧ ಉತ್ಪನ್ನಗಳ ಮಳಿಗೆಗಳನ್ನು ತೆರೆಯಲಾಗಿತ್ತು.