ಮಡಿಕೇರಿ, ಅ. ೮: ಕೊಡಗಿನ ದೇವರ ಕಾಡುಗಳು ಕೆಲವೆಡೆ ಅತಿಕ್ರಮಣವಾಗುತ್ತಿರುವ ಬಗ್ಗೆ ಹಲವು ಸಂಘ - ಸಂಸ್ಥೆಗಳ ಪ್ರಮುಖರು ಖಂಡನೆ ವ್ಯಕ್ತಪಡಿಸಿದ್ದು, ದೇವರಕಾಡು ಗಳನ್ನು ಸಂರಕ್ಷಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಇದರೊಂದಿಗೆ ಕುಂಬೇರಿ ಗ್ರಾಮದ ಬೆಳಕು ಅಯ್ಯಪ್ಪ ದೇವರಕಾಡಿನಲ್ಲಿ ರುದ್ರಭೂಮಿಗೆ ಜಾಗ ಒದಗಿಸುವ ವಿಚಾರಕ್ಕೆ ಸಂಬAಧಿಸಿದAತೆ ತಮ್ಮ ವಿರೋಧವಿರುವುದಾಗಿ ಅವರುಗಳು ಹೇಳಿದ್ದಾರೆ.

ನಗರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಮ್ಮತ್ತಿ ರೈತ ಸಂಘದ ಕಾನೂನು ಸಲಹೆಗಾರರಾದ ಬಿದ್ದಂಡ ಸಿ. ಸುಬ್ಬಯ್ಯ ಹಾಗೂ ಇತರರು ಈ ಬಗ್ಗೆ ಆಗ್ರಹಿಸಿದರು.

ಕಾರ್ಮಾಡು ಗ್ರಾ.ಪಂ. ವ್ಯಾಪ್ತಿಯ ಕಾವಾಡಿ ಭಗವತಿ ದೇವಸ್ಥಾನಕ್ಕೆ ಅಂದಾಜು ಸುಮಾರು ೫೦ ಎಕರೆಯಷ್ಟು ಬೇರೆ ಬೇರೆ ದೇವರ ಕಾಡುಗಳಿದ್ದು, ಅಲ್ಲಿ ಊರಿನವರಿಂದ ಪೂಜೆ ಪುನಸ್ಕಾರಗಳು ನಡೆಯುತ್ತಾ ಬಂದಿವೆ. ಈ ನಡುವೆ ಜಿಲ್ಲಾ ಪಂಚಾಯತ್ ಸಿಇಓ ಅವರು ತಾ. ೧೭.೯.೨೦೨೪ರಂದು ಕುಂಬೇರಿ ಗ್ರಾಮದ ಸರ್ವೆ ನಂ. ೧೦ರಲ್ಲಿ ೮.೯೨ ಎಕರೆ ಬೆಳಕು ಅಯ್ಯಪ್ಪ ದೇವರ ಕಾಡಿನಲ್ಲಿ ೧ ಎಕರೆ ಜಾಗವನ್ನು ಕಾರ್ಮಾಡು ಪಂಚಾಯಿತಿ ವ್ಯಾಪ್ತಿಯ ಹಿಂದೂಗಳಿಗೆ ರುದ್ರಭೂಮಿಗೆ ನೀಡಲು ಇ-ಪರಿವೇಶ್ ತಂತ್ರಾAಶದಲ್ಲಿ ನೋಂದಣಿ ಮಾಡಿಕೊಳ್ಳಲು ವೀರಾಜಪೇಟೆ ತಾ.ಪಂ. ಇ.ಓ. ಅವರಿಗೆ ಅನುಮತಿ ನೀಡಿದ್ದಾರೆ. ಕಾರ್ಮಾಡು ವ್ಯಾಪ್ತಿಯ ಹಿಂದೂಗಳಿಗೆ ಕುಂಬೇರಿ ಗ್ರಾಮದ ಸರ್ವೆ ನಂ. ೩/೩ರಲ್ಲಿ ೧.೭೦ ಎಕರೆ ಜಾಗ ಸ್ಮಶಾನಕ್ಕಾಗಿ ಇದ್ದರೂ ಕೂಡ ಇದೀಗ ದೇವರಕಾಡು ಜಾಗದಲ್ಲಿ ಸ್ಮಶಾನಕ್ಕೆ ಜಾಗ ನೀಡಿರುವುದು ಖಂಡನೀಯ ಎಂದು ಬಿ.ಸಿ. ಸುಬ್ಬಯ್ಯ ನುಡಿದರು. ಕೂಡಲೇ ಈ ಅನುಮತಿಯನ್ನು ಹಿಂಪಡೆದು ದೇವರಕಾಡುಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಎಲ್ಲಾ ದೇವರ ಕಾಡುಗಳು ಊರಿನವರ ಸ್ವಾಧೀನದಲ್ಲಿರುವುದರಿಂದ ಸರ್ಕಾರದ ದಾಖಲೆಗಳಲ್ಲಿ ಊರಿನವರ ಹೆಸರನ್ನು ಆರ್‌ಟಿಸಿಗೆ ದಾಖಲು ಮಾಡುವ ಬಗ್ಗೆ ಕೊಡಗಿನ ಎಲ್ಲಾ ದೇವಸ್ಥಾನಗಳ ಆಡಳಿತ ಮಂಡಳಿ, ಸಂಘ ಸಂಸ್ಥೆಗಳನ್ನು ಒಂದೇ ವೇದಿಕೆಗೆ ಕರೆತಂದು ಸಭೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದ ಅವರು ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ಮನವಿ ಮಾಡಿದರು.

ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಾಡಿಚಂಡ ಯು. ಗಣಪತಿ ಮಾತನಾಡಿ, ದೇವರಕಾಡು ಜಾಗವನ್ನು ಸ್ಮಶಾನಕ್ಕೆ ಒದಗಿಸುವ ಕ್ರಮ ಸರಿಯಲ್ಲ ಎಂದು ಹೇಳಿದರು.

ಗೋಷ್ಠಿಯಲ್ಲಿ ಅಖಿಲಕೊಡವ ಸಮಾಜ ಕಾರ್ಯದರ್ಶಿ ಕೀತಿಯಂಡ ಶರಿ ವಿಜಯಕುಮಾರ್, ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್, ಕಾವಾಡಿ ಭಗವತಿ ದೇವಸ್ಥಾನದ ದೇವತಕ್ಕರಾದ ಮುಕ್ಕಾಟಿರ ಚಂಗುನಾಚಪ್ಪ, ಪರಿಸರವಾದಿ ಕರ್ನಲ್ ಸಿ.ಪಿ. ಮುತ್ತಣ್ಣ ಉಪಸ್ಥಿತರಿದ್ದರು.