ಸೋಮವಾರಪೇಟೆ, ಅ. ೯: ತಳ್ಳುವ ಗಾಡಿಗೆ ಪರವಾನಗಿ ಪಡೆದು ಪಟ್ಟಣದ ಕೆಲವು ಕಡೆಗಳಲ್ಲಿ ಅನಧಿಕೃತ ವಾಗಿ ಶೆಡ್ ನಿರ್ಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದ ವರ್ತಕರಿಗೆ ತಿಳಿಹೇಳಿದರೂ ಕೇಳದ ಹಿನ್ನೆಲೆ, ಪ.ಪಂ. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರು, ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳನ್ನು ತೆರವುಗೊಳಿಸಿದರು.

ಪಟ್ಟಣದ ಸಿ.ಕೆ. ಸುಬ್ಬಯ್ಯ ರಸ್ತೆ ಹಾಗೂ ಮಡಿಕೇರಿ ರಸ್ತೆಯಲ್ಲಿ, ರಸ್ತೆಯ ಬದಿಯಲ್ಲಿ ದೊಡ್ಡ ಶೆಡ್‌ಗಳನ್ನು ನಿರ್ಮಿಸಿಕೊಂಡು ಶಾಶ್ವತವಾಗಿ ವ್ಯಾಪಾರಕ್ಕೆ ಮುಂದಾಗಿದ್ದ ೬ ಅಂಗಡಿಗಳನ್ನು ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಯಿತು.

ಈ ಹಿಂದಿನಿAದಲೂ ಅಂಗಡಿ ಮಾಲೀಕರುಗಳಿಗೆ ಹಲವಷ್ಟು ಬಾರಿ ಸೂಚನೆ ನೀಡಿದ್ದರೂ ಸಹ, ಪಂಚಾಯಿತಿಯ ಸೂಚನೆಗೆ ಕ್ಯಾರೇ ಎನ್ನದೇ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಪ.ಪಂ. ವಾಣಿಜ್ಯ ಮಳಿಗೆಯನ್ನು ಲಕ್ಷಾಂತರ ರೂಪಾಯಿ ಟೆಂಡರ್ ಕರೆದು, ಸಾವಿರಾರು ರೂಪಾಯಿ ಬಾಡಿಗೆ ಪಾವತಿಸುತ್ತಿರುವ ವರ್ತಕರು ಆಗಾಗ್ಗೆ ಈ ಬಗ್ಗೆ ಪಂಚಾಯಿತಿಗೆ ದೂರು ನೀಡುತ್ತಿದ್ದರು.

ಅಧಿಕಾರಿಗಳು ಸಂಬAಧಿಸಿದ ಶೆಡ್‌ಗಳ ಮಾಲೀಕರಿಗೆ ತೆರವುಗೊಳಿಸು ವಂತೆ ಸೂಚನೆ ನೀಡಿದ್ದರೂ ಸ್ಪಂದನ ಇಲ್ಲವಾಗಿತ್ತು. ಈ ಹಿನ್ನೆಲೆ ಪ.ಪಂ. ಅಧ್ಯಕ್ಷೆ ಜಯಂತಿ ಶಿವಕುಮಾರ್, ಉಪಾಧ್ಯಕ್ಷೆ ಮೋಹಿನಿ, ಸದಸ್ಯರು ಗಳಾದ ಮಹೇಶ್, ಪಿ.ಕೆ. ಚಂದ್ರು, ಮುಖ್ಯಾಧಿಕಾರಿ ನಾಚಪ್ಪ, ಅರೋಗ್ಯಾಧಿಕಾರಿ ಜಾಸಿಂ ಖಾನ್ ಸೇರಿದಂತೆ ಸಿಬ್ಬಂದಿಗಳು, ದಿಢೀರ್ ಕಾರ್ಯಾಚರಣೆ ನಡೆಸಿ, ಒಟ್ಟು ೬ ಅಂಗಡಿಗಳನ್ನು ತೆರವುಗೊಳಿಸಿದರು. ತಳ್ಳುವ ಗಾಡಿಯಲ್ಲಿ ವ್ಯಾಪಾರ ನಡೆಸುವುದು, ಬಿಸಿಲಿನಿಂದ ರಕ್ಷಿಸಲು ಛತ್ರಿಯನ್ನು ಬಳಸುವಂತೆ ಇದೇ ಸಂದರ್ಭ ಅಂಗಡಿಗಳ ಮಾಲೀಕರಿಗೆ ಸೂಚಿಸಿದರು. ಮುಂದೆಯೂ ಸಹ ಶೆಡ್‌ಗಳನ್ನು ನಿರ್ಮಿಸಿ, ಶಾಶ್ವತವಾಗಿ ವ್ಯವಸ್ಥೆಗೆ ಮುಂದಾದರೆ ಮುಲಾಜಿಲ್ಲದೇ ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.