ಕೂಡಿಗೆ, ಅ. ೯: ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಸವಿನೆನಪಿಗಾಗಿ ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಸಭಾಂಗಣದಲ್ಲಿ ‘ಶಿಕ್ಷಕ ಸಿರಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕೊಡಗು ವಿವಿ ಕುಲಪತಿ ಡಾ. ಅಶೋಕ ಸಂಗಪ್ಪ ಆಲೂರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಶಿಕ್ಷಕ ಸತ್ಪçಜೆಗಳನ್ನ ತಯಾರಿಸಿ ಸಮಾಜಕ್ಕೆ ಅರ್ಪಿಸುವಂತರಾಗಿರುತ್ತಾರೆ, ಅಲ್ಲದೇ ಗುರುವಿನ ಹೆಸರಿನಲ್ಲಿ ಶಿಷ್ಯರ ಸಾಮ್ರಾಜ್ಯದಲ್ಲಿ ಹೊಳೆಯುತ್ತಿರುವ ಸೂರ್ಯ ಶಿಕ್ಷಕ. ಶಿಕ್ಷಕ ವರ್ಗ ಜ್ಞಾನ ದಾಸೋಹದಂತಹ ಅತ್ಯಂತ ಶ್ರೇಷ್ಠ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಸಮಾಜದಲ್ಲಿ ಅಜ್ಞಾನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜ್ಯೋತಿ ಯಂತಹ ಸೇವೆ ಒದಗಿಸುತ್ತಿದ್ದಾರೆ. ವಿದ್ಯಾರ್ಥಿಗಳ ಜೀವನ ಪ್ರಕಾಶಮಯ ವಾಗಿಸಲು ಸತ್ಯ, ಸುಜ್ಞಾನದ ಬೀಜ ಬಿತ್ತುವ ಮೂಲಕ, ಜವಾಬ್ದಾರಿಯುತ ವ್ಯಕ್ತಿಯಾಗಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದರು. ಅಧಿಕ ಫಲ ಅಪೇಕ್ಷಿಸದೆ ಪಠ್ಯದೊಂದಿಗೆ ನಮ್ಮ ಜ್ಞಾನ, ಅನುಭವ, ಜೀವನ ಮೌಲ್ಯಗಳನ್ನು, ಬದುಕಿನ ಸೂತ್ರಗಳನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಮೂಲಕ ದೈವಿಕ ಕಾಯಕ ವನ್ನು ಶಿಕ್ಷಕರು ನಿರ್ವಹಿಸಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪೋಷಕರ, ದೈವದ ಹಾಗೂ ಗುರುವಿನ ಋಣ ಸಂದಾಯಕ್ಕೆ ಎಲ್ಲರೂ ಬದ್ದರಾಗಬೇಕಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರನ್ನು ಗುರುತಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುವರ್ಣ ಕರ್ನಾಟಕ ಸಂಭ್ರಮದ ಅಂಗವಾಗಿ ಬಳಗದಿಂದ ೫೦ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದು ೩೪ನೇ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಮಾತನಾಡಿ ಸಮಾಜದ ಒರೆಕೋರೆ ತಿದ್ದುವ ಹಾಗೂ ಸರಿಪಡಿಸುವ ತನ್ಮೂಲಕ ನಾಡನ್ನು ಕಟ್ಟುವ, ದೃಢ ಮನಸ್ಸಿನ ಜನಾಂಗ ತಯಾರಿಸುವ ಜವಾಬ್ದಾರಿ ಶಿಕ್ಷಕನದಾಗಬೇಕು ಎಂದರು.

ಸಾಹಿತಿ ಕಣಿವೆ ಭಾರಧ್ವಾಜ್ ಆನಂದತೀರ್ಥ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಚೇತನ್ ಮಾತನಾಡಿದರು. ಕೊಡಗು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎನ್. ಮಂಜುನಾಥ್, ಪದವಿಪೂರ್ವ ಉಪನ್ಯಾಸಕರ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷ ಫಿಲಿಪ್ ವಾಸ್, ಪ್ರಗತಿ ಪರ ರೈತ ಅಜಿರಂಗಳ ರಾಮಣ್ಣ, ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ. ಸೋಮಶೇಖರ್, ಬಳಗದ ಪ್ರಮುಖರಾದ ಎಂ.ಡಿ. ರಂಗಸ್ವಾಮಿ ಕೆ.ಕೆ. ನಾಗರಾಜಶೆಟ್ಟಿ, ಟಿ.ಕೆ. ಪಾಂಡುರAಗ ಇದ್ದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ೫೦ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ. ಅಶೋಕ್ ಸಂಗಪ್ಪ ಆಲೂರ ಅವರಿಗೆ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ನಿವೃತ್ತ ಶಿಕ್ಷಕ ಉರಾ ನಾಗೇಶ್ ನೆರವೇರಿಸಿದರು. ಉಪನ್ಯಾಸಕ ನಾಗರಾಜು ಸ್ವಾಗತಿಸಿ, ಶಿಕ್ಷಕ ಶಾಂತಕುಮಾರ್ ವಂದಿಸಿದರು.