ಸೋಮವಾರಪೇಟೆ, ಅ. ೮: ಪಟ್ಟಣದ ಬೇಳೂರು ರಸ್ತೆಯ ಮನೆಯೊಂದರಲ್ಲಿ ವೇಶ್ಯಾ ವಾಟಿಕೆ ನಡೆಯುತ್ತಿದ್ದ ಸಂದರ್ಭ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ, ಓರ್ವ ಸಂತ್ರಸ್ತೆಯನ್ನು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.

ಕರ್ಕಳ್ಳಿ ರಸ್ತೆಯ ಬಸವೇಶ್ವರ ದೇವಾಲಯದ ಸಮೀಪವಿರುವ ಮನೆಯೊಂದರಲ್ಲಿ ಬಾಡಿಗೆಗಿದ್ದ ವ್ಯಕ್ತಿಗಳು ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಈ ಸಂದರ್ಭ ಪಟ್ಟಣದಲ್ಲಿ ಬಾಡಿಗೆ ವ್ಯಾನ್ ಚಾಲಕನಾಗಿರುವ ಕರ್ಪಸ್ವಾಮಿ ಅಲಿಯಾಸ್ ಕೃಷ್ಣ, ಬಾಡಿಗೆಗಿರುವ ಪಿ.ಕೆ. ರಾಜೇಶ್ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದಾರೆ.

ವೇಶ್ಯಾವಾಟಿಕೆಗೆ ಕರೆಸಿದ್ದ ಮೈಸೂರಿನ ಮಹಿಳೆಯನ್ನು ರಕ್ಷಿಸಿ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ್ದಾರೆ. ಈಕೆಯ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಅವರು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವೇಶ್ಯಾವಾಟಿಕೆಯ ಪ್ರಮುಖ ಆರೋಪಿಯಾದ ಕೃಷ್ಣ ಈ ಹಿಂದೆಯೂ ದಂಧೆ ನಡೆಸುವ ಸಂದರ್ಭ ಸಿಕ್ಕಿಬಿದ್ದಿದ್ದು, ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ. ಈ ಹಿಂದೆ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ರಾಮಚಂದ್ರ ನಾಯಕ್ ಅವರು ಈತನ ಸಹಿತ ಇತರ ಆರೋಪಿಗಳನ್ನು ಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡಿದ್ದರು.

ಹೀಗಿದ್ದರೂ ಜಾಮೀನಿನ ಮೇಲೆ ಹೊರಬಂದು ಮತ್ತೆ ಇಂತಹ ಕೆಲಸದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಕೆಲ ದಿನಗಳ ಹಿಂದೆ ‘ಶಕ್ತಿ’ಯಲ್ಲಿ ವರದಿ ಪ್ರಕಟವಾಗಿತ್ತು. ಆಗಿನಿಂದಲೂ ಕಾರ್ಯಾಚರಣೆಗೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದರು. ಕೆಲ ಸಮಯ ದಂಧೆಯನ್ನು ನಿಲ್ಲಿಸಿದ್ದ ಕೃಷ್ಣ ಮತ್ತೆ ದಂಧೆ ಆರಂಭಿಸಿದ್ದ. ನಿನ್ನೆ ಮೈಸೂರಿನಿಂದ ಮಹಿಳೆ ಬಂದಿರುವ ಬಗ್ಗೆ ಖಚಿತ ವರ್ತಮಾನದ ಮೇರೆ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಹದೇವ ನೇತೃತ್ವದ ತಂಡ ಯಶಸ್ವಿಯಾಗಿದೆ.

ಈ ಹಿಂದೆ ಬಸ್‌ನ ಮಾಲೀಕನಾಗಿದ್ದ ಕೃಷ್ಣ, ತನ್ನ ಬಸ್‌ಗೆ ಕ್ಲೀನರ್ ಆಗಿ ಬಂದ ಬಂಧನವಾಗಿರುವ ಆರೋಪಿಯ ಪತ್ನಿಯನ್ನು ಬಳಸಿಕೊಂಡು ದಂಧೆಯನ್ನು ನಡೆಸುತ್ತಿದ್ದ.

(ಮೊದಲ ಪುಟದಿಂದ) ಇತರೆಡೆಗಳಿಂದ ಯುವತಿಯರನ್ನು ಕರ್ಕಳ್ಳಿ ರಸ್ತೆಯಲ್ಲಿರುವ ಬಾಡಿಗೆ ಮನೆಗೆ ಕರೆಸಿ, ಸ್ಥಳೀಯ ವ್ಯಕ್ತಿಗಳಿಗೆ ಅವರುಗಳ ಭಾವಚಿತ್ರ ಕಳುಹಿಸಿ, ರೇಟ್ ಫಿಕ್ಸ್ ಮಾಡುತ್ತಿದ್ದ. ಹಣ ಒಪ್ಪಿಗೆಯಾದಂತೆ ಬಾಡಿಗೆ ಮನೆಗೆ ಕರೆದೊಯ್ದು ವೇಶ್ಯಾವಾಟಿಕೆ ಮೂಲಕ ಹಣ ಸಂಪಾದನೆ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆಯಿಂದ ಪೊಲೀಸರು ಒಂದು ಕಾರು, ೨೧೮೦ ರೂ. ನಗದು, ೪ ಮೊಬೈಲ್‌ಗಳನ್ನು ವಶಕ್ಕೆ ಪಡೆದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ವೇಶ್ಯಾವಾಟಿಕೆಯಲ್ಲಿ ಎರಡು ಬಾರಿ ಬಂಧನ: ವೃತ್ತಿಪರ ಕಳ್ಳರು ಆಗಾಗ್ಗೆ ಕಳ್ಳತನ ಮಾಡಿ ಜೈಲಿಗೆ ಹೋಗುವ ಪ್ರಕರಣಗಳು ನಡೆಯುತ್ತಿದ್ದರೂ ವೇಶ್ಯಾವಾಟಿಕೆ ನಡೆಸಿ ಒಮ್ಮೆ ಸಿಕ್ಕಿಬಿದ್ದು, ಜೈಲಿಗೆ ಹೋಗಿ ಬಂದ ವ್ಯಕ್ತಿ, ಮತ್ತೆ ಅದೇ ಕೃತ್ಯ ನಡೆಸಿ ಪೊಲೀಸರಿಗೆ ಸಿಕ್ಕಿಬಿದ್ದಿರುವುದು ಆಶ್ಚರ್ಯ ಮೂಡಿಸಿದೆ.

ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಾದೇವ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ವೀಣಾ, ಲೋಕೇಶ್, ಪ್ರವೀಣ್, ಮಲ್ಲೇಶ, ಅನಂತ್, ಭರತ್, ರಾಜೇಶ್ವರಿ, ನೀಲಾಂಬಿಕೆ ಅವರುಗಳು ಭಾಗವಹಿಸಿದ್ದರು.