ಮಡಿಕೇರಿ : ಮಡಿಕೇರಿ ದಸರಾದಲ್ಲಿ ಜನದಟ್ಟಣೆ ಸಂಭವಿಸುವ ಹಿನ್ನೆಲೆ ವಾಹನ ಸಂಚಾರದಲ್ಲಿ ಬದಲಾವಣೆ ಇರಲಿದೆ ಎಂದು ಮಡಿಕೇರಿ ಡಿ.ವೈ.ಎಸ್.ಪಿ. ಮಹೇಶ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು 'ಶಕ್ತಿ'ಗೆ ಮಾಹಿತಿ ನೀಡಿದ ಅವರು, ತಾ. ೧೨ ರ ಸಂಜೆ ೪ ಗಂಟೆಯ ನಂತರ ನಗರದೊಳಗೆ ವಾಹನಗಳ ಸಂಚಾರ ಹಾಗೂ ನಿಲುಗಡೆಯನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ. ಮೈಸೂರು-ಸೋಮವಾರಪೇಟೆ ಕಡೆಯಿಂದ ಬರುವ ವಾಹನಗಳಿಗೆ ಚೈನ್‌ಗೇಟ್ ಮೂಲಕ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ.

(ಮೊದಲ ಪುಟದಿಂದ) ವಾಹನ ಸಂಖ್ಯೆ ಹೆಚ್ಚಾದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನವನ್ನು ಬಳಸಿಕೊಳ್ಳಲಾಗುವುದು. ವೀರಾಜಪೇಟೆ ರಸ್ತೆಯಿಂದ ಬರುವ ವಾಹನಗಳಿಗೆ ಮೇಕೇರಿ ಸರಕಾರಿ ಶಾಲೆಯಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ಮಾಡಿಕೊಡಲಾಗುವುದು. ಮಂಗಳೂರು ರಸ್ತೆಯಿಂದ ಬರುವ ವಾಹನಗಳಿಗೆ ತಾಳತ್ತಮನೆ ನೇತಾಜಿ ಯುವಕ ಸಂಘದ ಜಾಗ ಹಾಗೂ ಗ್ಲಾಸ್ ಬ್ರಿಡ್ಜ್ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ವಾಹನ ನಿಲುಗಡೆ ನಂತರ ಅಲ್ಲಿಯೇ ಆಟೋ ಸೇವೆ ಇರಲಿದ್ದು, ಈಗಾಗಲೇ ಒಬ್ಬರಿಗೆ ೨೦ ರೂಪಾಯಿ ನಿಗದಿಪಡಿಸಿ ನಗರಕ್ಕೆ ಬರಲು ಅವಕಾಶ ಕಲ್ಪಿಸಲಾಗಿದೆ. ಏನಾದರೂ ಒಬ್ಬರು ಒಂದು ಆಟೋದಲ್ಲಿ ಬರಬೇಕೆಂದಲ್ಲಿ ರೂ. ೧೦೦ ನೀಡಿ ಆಟೋ ಸೇವೆ ಪಡೆಯಬಹುದು ಎಂದು ತಿಳಿಸಿದ್ದಾರೆ.

ಸಂಜೆ ೪ ಗಂಟೆಯಿAದ ಮೇಕೇರಿಯಿಂದ, ಜನರಲ್ ತಿಮ್ಮಯ್ಯ ವೃತ್ತದ ತನಕ ಎಲ್ಲಿಯೂ ವಾಹನ ನಿಲುಗಡೆ ಮಾಡುವಂತಿಲ್ಲ. ಹಾಗೆಯೇ ನಗರದೊಳಗೆ ರಸ್ತೆ ಬದಿಯಲ್ಲಿಯೂ ವಾಹನ ಪಾರ್ಕಿಂಗ್‌ಗೆ ನಿರ್ಬಂಧ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

‘ಮಫ್ತಿ’ಯಲ್ಲಿ ಮಹಿಳಾ ಪೊಲೀಸರು

ಮಹಿಳೆಯರನ್ನು ಚುಡಾಯಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ‘ಜಂಬೋ ಟೀಂ' ರಚಿಸಲಾಗಿದೆ. ೬ ಜನರ ೮ ಮಹಿಳಾ ಪೊಲೀಸ್ ತಂಡ ‘ಮಫ್ತಿ’ಯಲ್ಲಿ ಆಯಾಕಟ್ಟಿನ ಜಾಗದಲ್ಲಿದ್ದು, ಪರಿಶೀಲನೆ ನಡೆಸುತ್ತಿರುತ್ತದೆ. ಪುಂಡ-ಪೋಕರಿಗಳು ಚುಡಾಯಿಸುವುದು ಕಂಡು ಬಂದಲ್ಲಿ ತಕ್ಷಣ ‘ಜಂಬೋ ಟೀಂ’ನ ಪುರುಷ ಸಿಬ್ಬಂದಿಗಳ ಸಹಾಯದೊಂದಿಗೆ ಅವರನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಮಹೇಶ್ ಎಚ್ಚರಿಸಿದ್ದಾರೆ.