ಮುಳ್ಳೂರು, ಅ. ೧೦: ಸಮೀಪದ ಶನಿವಾರಸಂತೆ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಶಾಲೆಯ ಐದು ಮತ್ತು ಆರನೇ ತರಗತಿ ವಿದ್ಯಾರ್ಥಿಗಳಿಂದ ಅವರ ಮನೆಗಳಲ್ಲಿ ಬೆಳೆದ ಹಣ್ಣು ಹಂಪಲು, ತರಕಾರಿ, ಸೊಪ್ಪು ಹಾಗೂ ಮನೆಯಲ್ಲಿ ತಯಾರಿಸಿದ ವೈವಿಧ್ಯಮಯ ತಿಂಡಿ ತಿನಿಸುಗಳ ಸಂತೆ ಮಾರುಕಟ್ಟೆಯನ್ನು ಏರ್ಪಡಿಸಲಾಗಿತ್ತು.

ಮಾರುಕಟ್ಟೆಯಲ್ಲಿ ವಿದ್ಯಾರ್ಥಿಗಳು ತೆಂಗಿನಕಾಯಿ, ಕಿತ್ತಳೆ, ಸೀಬೆಹಣ್ಣು, ಬಾಳೆ ಹಣ್ಣು, ಎಳನೀರು, ಬಾಳೆಕಾಯಿ, ನಿಂಬೆಹಣ್ಣು, ಸೌತೆಕಾಯಿ, ಹೆರಳಿಕಾಯಿ, ಕುಂಬಳಕಾಯಿ, ಟೋಮೆಟೊ, ಬೂದುಕುಂಬಳ, ಜೋಳ, ಕರಿಬೇವು ಮುಂತಾದ ಸೊಪ್ಪು ಸೇರಿದಂತೆ ಮನೆಯಲ್ಲಿ ತಯಾರಿಸಿದ ಚುರುಮುರಿ, ಪಾನಿಪುರಿ, ಕೊಬ್ಬರಿ ಮಿಠಾಯಿ, ಹುಣಸೆಹಣ್ಣಿನ ಲಾಲಿಪಾಪ್, ಚಕ್ಲಿ, ಕೋಡುಬಳೆ ಮುಂತಾದ ವೈವಿಧ್ಯಮಯ ತಿನಿಸುಗಳನ್ನು ತಂದು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿದರು.

ಪೋಷಕರು ಮತ್ತು ಸಾರ್ವಜನಿಕರು ಗ್ರಾಹಕರಾಗಿ ಮಾರುಕಟ್ಟೆಗೆ ಬಂದು ವಿದ್ಯಾರ್ಥಿಗಳಿಂದ ಇವೆಲ್ಲವನ್ನು ಖರೀದಿಸಿದರು. ಈ ಮೂಲಕ ವಿದ್ಯಾರ್ಥಿಗಳಿಗೆ ವ್ಯವಹಾರ, ಲೆಕ್ಕಾಚಾರ ಜ್ಞಾನದ ಬಗ್ಗೆ ಪ್ರೋತ್ಸಾಹ ನೀಡಿದರು. ಈ ಸಂದರ್ಭ ಶಾಲಾ ಪ್ರಾಂಶುಪಾಲೆ ಡಿ. ಸುಜಲಾದೇವಿ ಹಾಜರಿದ್ದರು.