ಚೆಯ್ಯಂಡಾಣೆ, ಅ. ೧೦: ರಕ್ತದಾನದಿಂದ ಒಬ್ಬರ ಜೀವ ಉಳಿಸಲು ಸಾಧ್ಯ, ರಕ್ತಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲ ಎಂದು ಮಡಿಕೇರಿ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಕರುಂಬಯ್ಯ ಹೇಳಿದರು.

ಚೆಯ್ಯಂಡಾಣೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ದೀನಾ ದಯಾಳ್ ಉಪಾಧ್ಯ ಅವರ ಜನ್ಮದಿನದ ಪ್ರಯುಕ್ತ ಇಲ್ಲಿನ ನರಿಯಂದಡ ಅಯ್ಯಪ್ಪ ಯುವಕ ಸಂಘದಿAದ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ಬೆಳಿಯಂಡ್ರ ಹರಿಪ್ರಸಾದ್ ನಮ್ಮ ಪ್ರಧಾನಿ ನರೇಂದ್ರ ಮೋದಿ ಹಾಗೂ ದೀನ ದಯಾಳ್ ಉಪಾಧ್ಯಾಯ ರವರ ಜನ್ಮದಿನದ ಪ್ರಯುಕ್ತ ನಾವು ಇಂದು ಚೆಯ್ಯಂಡಾಣೆ ಆರೋಗ್ಯ ಕೇಂದ್ರದಲ್ಲಿ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿದ್ದೇವೆ, ೪೦ಕ್ಕೂ ಹೆಚ್ಚು ರಕ್ತದಾನಿಗಳು ಬಂದು ರಕ್ತದಾನ ಮಾಡಿದ್ದಾರೆ ಎಂದರು. ಅಯ್ಯಪ್ಪ ಯುವಕ ಸಂಘದ ಮಾಜಿ ಅಧ್ಯಕ್ಷ ತೋಟಂಬೈಲು ಅನಂತ್ ಕುಮಾರ್ ಮಾತನಾಡಿದರು.

ಈ ಸಂದರ್ಭ ಚೆಯ್ಯಂಡಾಣೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಂಚು ಗೌತಮಿ, ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿ ಕೆ.ಎಂ. ವೇದಾವತಿ, ಸಂಘದ ಹಿರಿಯ ಸದಸ್ಯರಾದ ಪೊಕ್ಕುಳಂಡ್ರ ನಾಣಯ್ಯ, ಅಯ್ಯಪ್ಪ ಯುವಕ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.