ಕಣಿವೆ, ಅ. ೧೦: ಮಹಿಳೆಯರು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಸ್ವಾವಲಂಬಿಗಳಾಗಿ ಉತ್ತಮ ಬದುಕು ಕಟ್ಟಬೇಕೆಂದು ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ದೀಪಿಕಾ ಕರೆಕೊಟ್ಟರು.

ಕೂಡಿU ಕೃಷಿ ಫಾರಂ ಒಳಗಿರುವ ಯೂನಿಯನ್ ಬ್ಯಾಂಕಿನ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ೩೦ ದಿನಗಳ ಕಾಲ ೩೧ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಟೈಲರಿಂಗ್ ತರಬೇತಿಯ ೨೭೧ನೇ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಅರ್ಹತಾ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದರು. ಮಹಿಳೆಯರು ತಾವು ಕಲಿತ ಉದ್ಯೋಗವನ್ನು ಸಮರ್ಥವಾಗಿ ಬಳಕೆ ಮಾಡುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕಿದೆ.

ಜೊತೆಗೆ ಆಧುನಿಕ ಜೀವನ ಶೈಲಿಯಿಂದ ಬದಲಾಗುತ್ತಿರುವ ಒತ್ತಡಗಳಿಂದ ತಮ್ಮ ಆರೋಗ್ಯಕ್ಕೂ ಹೆಚ್ಚಿನ ನಿಗಾವಹಿಸಬೇಕೆಂದರು.

ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಪ್ರಕಾಶ್ ಕುಮಾರ್ ಮಾತನಾಡಿ, ಯೂನಿಯನ್ ಬ್ಯಾಂಕ್ ವತಿಯಿಂದ ದೇಶವ್ಯಾಪಿ ೬೦೦ ತರಬೇತಿ ಸಂಸ್ಥೆಗಳ ಪೈಕಿ ಕೊಡಗು ಜಿಲ್ಲೆಯ ಕೂಡಿಗೆಯ ಸಂಸ್ಥೆಯೂ ಒಂದಾಗಿದೆ. ಇದುವರೆಗೂ ಸಂಸ್ಥೆಯಲ್ಲಿ ೭೫೦೦ ಮಂದಿಗೆ ವಿವಿಧ ರೀತಿಯ ತರಬೇತಿಗಳನ್ನು ನೀಡಲಾಗಿದೆ. ಈ ಪೈಕಿ ೫೫೦೦ ಮಹಿಳೆಯರೇ ಹೆಚ್ಚಿನ ಫಲಾನುಭವಿಗಳಾಗಿದ್ದಾರೆ.

ಪುರುಷರಿಗಿಂತ ಗ್ರಾಮೀಣ ಮಹಿಳೆಯರಲ್ಲಿ ಕಲಿಕೆಯ ತರಬೇತಿಗೆ ಹೆಚ್ಚಿನ ಆಸಕ್ತಿಯಿದ್ದು ಅವರಿಗೆ ಕೌಟುಂಬಿಕವಾದ ಸಮಸ್ಯೆಗಳು ಒಂದೆಡೆಯಾದರೆ, ಅವರು ಏಕಾಂಗಿಯಾಗಿ ಸ್ವ-ಉದ್ಯೋಗ ತರಬೇತಿಗಳಿಗೆ ನೇರವಾಗಿ ಬಂದು ಕಲಿಯುವ ಸ್ವಾತಂತ್ರ‍್ಯವೇ ಇಲ್ಲದಿರುವ ಅನೇಕ ಪ್ರಕರಣಗಳು ಕಂಡು ಬರುತ್ತಿವೆ ಎಂದು ವಿಷಾದಿಸಿದರು. ಸಂಸ್ಥೆಯಲ್ಲಿನ ನೌಕರರಾದ ಚಿಕ್ಕಮಗಳೂರು ಸುಕನ್ಯಾ ಮಹಿಳೆಯರಿಗೆ ತಿಂಗಳ ಕಾಲ ಸೂಕ್ತ ತರಬೇತಿ ಹಾಗೂ ಹೊಲಿಗೆ ಯಂತ್ರಗಳ ಕುರಿತಾದ ಸಮಗ್ರ ಮಾಹಿತಿ ನೀಡಿದರು. ಸಂಸ್ಥೆಯ ಸಲಾಮುದ್ದೀನ್, ಪ್ರೀತಿ, ನವ್ಯ, ರೂಪ ಇದ್ದರು. ಶಿಬಿರಾರ್ಥಿ ಪ್ರಿಯಾ ಸ್ವಾಗತಿಸಿದರೆ, ಪವಿತ್ರ ಪ್ರಾರ್ಥಿಸಿದರು. ಕಾವ್ಯ ನಿರೂಪಿಸಿದರು.