ಸೋಮವಾರಪೇಟೆ, ಅ. ೧೦: ಸೋಮವಾರಪೇಟೆಯ ಭಾಗಕ್ಕೆ ಜನೋತ್ಸವ ಮಾದರಿಯಲ್ಲಿ ನಡೆಯುವ ಆಯುಧ ಪೂಜೋತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಸ್ಥಳೀಯ ಖಾಸಗಿ ಬಸ್ ನಿಲ್ದಾಣದಲ್ಲಿ ಬೃಹತ್ ವೇದಿಕೆ ನಿರ್ಮಾಣಗೊಂಡಿದೆ.

ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅದ್ಧೂರಿಯಾಗಿ ಆಯುಧ ಪೂಜೋತ್ಸವ ಸಮಾರಂಭ ಆಯೋಜಿಸಿದ್ದು, ಇದಕ್ಕೆ ಪೂರಕವಾಗಿ ಪಟ್ಟಣವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಪಟ್ಟಣದ ಪ್ರತಿಮೆಗಳನ್ನು ಶುಚಿಗೊಳಿಸಿ, ಸುಣ್ಣಬಣ್ಣ ಬಳಿದು, ತಳಿರು ತೋರಣಗಳಿಂದ ಸಿಂಗರಿಸಲಾಗಿದೆ.

ತಾ.೧೧ರAದು (ಇಂದು) ಬೆಳಿಗ್ಗೆ ೭ ಗಂಟೆಗೆ ಸಂಘದ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಕಾರ್ಯಕ್ರಮಗಳಿಗೆ ಚಾಲನೆ, ನಂತರ ಪಟ್ಟಣದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ, ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ನಡೆಯಲಿದ್ದು, ೧೦ ಗಂಟೆಗೆ ಖಾಸಗಿ ಬಸ್ ನಿಲ್ದಾಣದಲ್ಲಿ ಆಯುಧ ಪೂಜಾ ಸಮಾರಂಭದ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ತಾಲೂಕು ಮಟ್ಟದಲ್ಲಿ ನೃತ್ಯ ಸ್ಪರ್ಧೆ, ಕಾಲೇಜು ಮತ್ತು ಸಾರ್ವಜನಿಕ ವಿಭಾಗದಲ್ಲಿ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ನಗದು ಬಹುಮಾನ ವಿತರಿಸಲಾಗುವುದು. ಮಧ್ಯಾಹ್ನ ಸಾವಿರಾರು ಮಂದಿಗೆ ಅನ್ನ ಸಂತರ್ಪಣೆ ಮಾಡಲಾಗುವುದು.

ಸಂಜೆ ೭ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಘದ ಸದಸ್ಯರುಗಳಾದ ಸುಲೈಮಾನ್, ರಾಮಚಂದ್ರ ಸೇರಿದಂತೆ ಸಾಮಾಜಿಕ ಕ್ಷೇತ್ರದ ಸೇವೆಗಾಗಿ ಲೈನ್‌ಮೆನ್ ಸದಾಶಿವ ಜಾದವ್, ಹಾಕಿ ತರಬೇತುದಾರ ಜನಾರ್ಧನ್ ಅವರುಗಳನ್ನು ಸನ್ಮಾನಿಸಲಾಗುವುದು. ಇದರೊಂದಿಗೆ ಅಲಂಕೃತ ವರ್ಕ್ಶಾಪ್, ವಾಹನಗಳ ಸ್ಪರ್ಧೆಯಲ್ಲಿ ವಿಜೇತರಾದ ವರಿಗೆ ಬಹುಮಾನ ವಿತರಿಸಲಾಗುವುದು.

ನಂತರ ಬೆಂಗಳೂರಿನ ವಿ.ಪಿ.ಆರ್. ಈವೆಂಟ್ಸ್ ತಂಡದಿAದ ಸಂಗೀತ ರಸಮಂಜರಿ ಆಯೋಜಿಸಲಾಗಿದೆ. ಕಿರುತೆರೆಯ ಸರಿಗಮಪ, ಕನ್ನಡ ಕೋಗಿಲೆ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ನ ವಿವಿಧ ಕಲಾವಿದರು ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಬಾಲಕೃಷ್ಣ ಪೂಜಾರಿ ತಿಳಿಸಿದ್ದಾರೆ.