ಕಣಿವೆ, ಅ. ೧೦: ಕುಶಾಲನಗರ ತಾಲೂಕಿನ ಬೆಂಡೆಬೆಟ್ಟ ಅರಣ್ಯದಂಚಿನ ಗ್ರಾಮಗಳಲ್ಲಿ ಆರರಿಂದ ಏಳು ಕಾಡಾನೆಗಳ ಹಿಂಡು ನಿರಂತರವಾಗಿ ನಡೆಸುತ್ತಿರುವ ದಾಳಿಯಿಂದಾಗಿ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ.

ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಹುದುಗೂರು, ಹುಲುಗುಂದ, ಕಾಳಿದೇವನಹೊಸೂರು, ಯಡವನಾಡು, ಹಾರಂಗಿ ಹಿನ್ನೀರು ವ್ಯಾಪ್ತಿಯ ಕಲ್ಲೂರು, ಹೆರೂರು ಮೊದಲಾದ ಗ್ರಾಮಗಳಲ್ಲಿ ಕೃಷಿಕರು ಬೆಳೆದಂತಹ ಬೆಳೆಗಳು ಕೃಷಿಕರ ಕೈ ಸೇರುವ ಮುನ್ನವೇ ಕಾಡಾನೆಗಳ ಪಾಲಾಗುತ್ತಿವೆ.

ಹುದುಗೂರಿನ ದಾದಾ ಉತ್ತಯ್ಯ ಎಂಬವರಿಗೆ ಸೇರಿದ ಅಡಿಕೆ ತೋಟಕ್ಕೆ ದಾಳಿಯಿಟ್ಟ ಕಾಡಾನೆಗಳ ಹಿಂಡು ಒಂದು ಎಕರೆಯಷ್ಟು ಭತ್ತದ ಗದ್ದೆಗಳನ್ನು ತುಳಿದು ನಾಶಪಡಿಸಿದ್ದರೆ, ಸುಮಾರು ೫೦ಕ್ಕೂ ಹೆಚ್ಚಿನ ಫಸಲು ಭರಿತ ಅಡಕೆ ಗಿಡಗಳನ್ನು ನೆಲಸಮ ಮಾಡಿವೆ.

ಆದರೆ, ವರ್ಷಗಟ್ಟಲೇ ಕಾಲ ಬೆಳೆದಂತಹ ಫಸಲುಭರಿತ ಮರಗಳನ್ನು ನಿಮಿಷದಲ್ಲಿ ನಾಶ ಮಾಡಿ ತೆರಳುವ ಕಾಡಾನೆಗಳಿಂದಾಗಿ ವಿಶೇಷವಾಗಿ ಅಡಿಕೆ ಕೃಷಿಕರು ಸಂಪೂರ್ಣ ಸೊರಗಿ ಹೋಗಿದ್ದಾರೆ.

ಹುದುಗೂರು ವ್ಯಾಪ್ತಿಯ ಬೆಂಡೆಬೆಟ್ಟ ಅರಣ್ಯದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡನ್ನು ಕೂಡಲೇ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂಬುದು ಗ್ರಾಮಸ್ಥರ ಕೋರಿಕೆಯಾಗಿದೆ.

ಈ ಬಗ್ಗೆ "ಶಕ್ತಿ"ಗೆ ಮಾಹಿತಿ ನೀಡಿದ ಗ್ರಾಮ ಪಂಚಾಯಿತಿ ಸದಸ್ಯ ಹುದುಗೂರು ರವಿ, ಕಾಡಾನೆಗಳಿಂದ ನಿತ್ಯವೂ ನಮ್ಮ ರೈತರಿಗೆ ಬಹಳ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ.

ಅರಣ್ಯ ಇಲಾಖೆಯಿಂದ ಸಮರ್ಪಕವಾದ ಬೆಳೆ ನಷ್ಟ ಪರಿಹಾರವೂ ದೊರಕದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ಹಾರಂಗಿ ಸಾಕಾನೆ ಶಿಬಿರದ ಸಾಕಾನೆಗಳ ಸಹಕಾರದೊಂದಿಗೆ ಕಾಡಾನೆಗಳನ್ನು ದೂರ ಅಟ್ಟುವ ಕೆಲಸವಾಗಬೇಕಿದೆ ಎಂದರು. ಹಾಗೆಯೇ ಕಾಡಂಚಿನ ಗ್ರಾಮಗಳ ಸುತ್ತ ಕಾಡಾನೆಗಳು ನಾಡಿಗೆ ಲಗ್ಗೆಯಿಡದಂತೆ ಅರಣ್ಯದ ಸುತ್ತಲೂ ರೈಲ್ವೆ ಕಂಬಿಗಳನ್ನು ಅಳವಡಿಸಿ ಕಾಡಾನೆಗಳ ಹಾವಳಿಯನ್ನು ಶಾಶ್ವತವಾಗಿ ನಿಯಂತ್ರಿಸಬೇಕೆAದು ಒತ್ತಾಯಿಸಿದರು.