ಮಡಿಕೇರಿ, ಅ. ೧೦: ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ವತಿಯಿಂದ ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಮೇಲ್ವಿಚಾರಕರಿಗೆ ‘ಮಕ್ಕಳ ಸ್ನೇಹಿ ಗ್ರಾಮೀಣ ಗ್ರಂಥಾಲಯ’ ಎಂಬ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಪೊನ್ನಂಪೇಟೆ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಾಗಾರವನ್ನು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅಪ್ಪಣ್ಣ ಅವರು ಉದ್ಘಾಟಿಸಿದರು. ಗ್ರಂಥಾಲಯಕ್ಕೆ ಭೇಟಿ ನೀಡುವ ಶಾಲಾ ಮಕ್ಕಳಿಗೆ ಸೂಕ್ತ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ನಾನಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಎಲ್ಲಾ ಮೇಲ್ವಿಚಾರಕರು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಂಡು ತಮ್ಮ ವ್ಯಾಪ್ತಿಯಲ್ಲಿನ ಶಾಲಾ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲಾ ಮೇಲ್ವಿಚಾರಕರು ತಮ್ಮ ಗ್ರಾಮ ಪಂಚಾಯಿತಿಯ ನೆರವಿನಿಂದ ಉತ್ತಮ ಸಮರ್ಥ ಮಕ್ಕಳನ್ನು ನಿರ್ಮಾಣ ಮಾಡಬೇಕಾದ ಜವಾಬ್ದಾರಿ ಇದ್ದು, ಇದರ ಬಗ್ಗೆ ಕ್ರಮ ವಹಿಸಬೇಕು ಎಂದರು. ತರಬೇತಿ ಸಂಯೋಜಕ ಉಮೇಶ್, ಗ್ರಾಮ ಡಿಜಿ ವಿಕಸನದ ಸಂಯೋಜಕ ದಿಲೀಪ್ ಮತ್ತು ಸಂಪನ್ಮೂಲ ವ್ಯಕ್ತಿ ಜಿ.ಆರ್. ಯೋಗೀಶ್ ಅವರು ಮಕ್ಕಳ ಸ್ನೇಹಿ ಗ್ರಂಥಾಲಯದ ನಿರ್ಮಾಣ, ನಾಗರಿಕ ಪ್ರಜ್ಞೆ, ಪರಿಸರ ಮತ್ತು ಪಕ್ಷಿ ಪರಿಚಯ, ಪೋಷಕರಿಗೆ ಹಾಗೂ ಸ್ವಸಹಾಯ ಸಂಘಗಳ ಸದಸ್ಯರುಗಳಿಗೆ ಡಿಜಿಟಲ್ ಸಾಕ್ಷರತೆ, ಮಕ್ಕಳ ಹಕ್ಕು ಮತ್ತು ಕಾರ್ಯಸೂಚಿ ಬಗ್ಗೆ ಮಾಹಿತಿ ನೀಡಿದರು.