ಮಡಿಕೇರಿ, ಅ. ೧೧: ಒಕ್ಕ ಪದ್ಧತಿ ಎಂಬುದು ಕೊಡವ ಜನಾಂಗದ ಬುಡ-ಬೇರು. ಕೊಡವರಲ್ಲಿ ಯಾರೇ ಇರಲಿ, ಮೊದಲು ಕೇಳುವುದೇ ‘ನೀದಾಡ?, ನಿಂಗದಾಡ?’. ಮುಂದುವರೆದು ವ್ಯಕ್ತಿಯ ಹೆಸರು, ತಂದೆ-ತಾಯಿಯ ಹೆಸರು. ಇಂತಿರುವ ಕೊಡವ ಒಕ್ಕಾಮೆ ಅರಸರ ಕಾಲಕ್ಕಿಂತ ಮೊದಲು ನಾಲ್ಕು ಸಾವಿರಕ್ಕಿಂತ ಜಾಸ್ತಿ ಇದ್ದವೆಂಬ ಹಿರಿಯರ ಹೇಳಿಕೆ ಹುಸಿಯಲ್ಲ.

ಪ್ರಸ್ತುತ ಕೊಡವ ಒಕ್ಕಾಮೆಯ ಅರಿವಿಕೆ, ಕೊಡವ ಕುಟುಂಬಗಳ ಒಟ್ಟು ಸಂಖ್ಯೆ ೧೦೪೭ ಎಂಬ ನಿಖರವಾದ ಮಾಹಿತಿ ಇದೆ. ಈ ಎಲ್ಲಾ ಕುಟುಂಬ ಗಳಲ್ಲಿ ‘ಒಕ್ಕೊರ್ಮೆ’ ನಡೆಸಲು ಕರ್ನಾಟಕ ಸಾಹಿತ್ಯ ಅಕಾಡೆಮಿ ಬಯಸಿದ್ದು ಒಕ್ಕ ಪದ್ಧತಿ, ಒಕ್ಕದ ಆಚರಣೆಗಳು, ಒಕ್ಕದ ಕಟ್ಟುಕಟ್ಟಳೆಗಳು, ಒಕ್ಕದ ನೀತಿ-ನಿಯಮಗಳು ಸೇರಿದಂತೆ ಒಟ್ಟಾರೆ ಚಿತ್ರಣವನ್ನು ತಿಳಿದುಕೊಂಡು ದಾಖಲೀಕರಣ ಮಾಡಲು ಉದ್ದೇಶಿದೆ. ಇದು ಭವಿಷ್ಯದಲ್ಲಿ ಕೊಡವ ಕುಲದ ಹೆಗ್ಗುರುತಾಗಿ ಉಳಿಯಲಿದೆ. ಆದ್ದರಿಂದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಕೊಡವರು ಸೇರಿದಂತೆ ಕೊಡವ ಭಾಷಿಕ ಜನಾಂಗಗಳು ತಮ್ಮ ತಮ್ಮ ಒಕ್ಕ/ ಕುಟುಂಬದ ಹೆಸರನ್ನು ಸಂಕ್ಷಿಪ್ತ ಮಾಹಿತಿಯೊಡನೆ ನೋಂದಾಯಿಸಿ ಕೊಳ್ಳಲು ಕೇಳಲಾಗಿದೆ. ಕುಟುಂಬದ ಹೆಸರು, ಕುಟುಂಬದ ಹಿರಿಯರ ಹೆಸರು, ಪಟ್ಟೆದಾರರ ಹೆಸರು, ಮೂಲ ಪುರುಷ-ಕಾರೋಣರ ಹೆಸರು, ಕುಟುಂಬದ ಐನ್‌ಮನೆ, ಬಲ್ಯಮನೆ ಇರುವ ಊರುಕೇರಿಯ ಹೆಸರು, ಒಟ್ಟಾರೆ ಅಂದಾಜು ಜನ ಸಂಖ್ಯೆ-ಇವಿಷ್ಟನ್ನು ಮೊಬೈಲ್-ದೂರವಾಣಿ ಸಂಖ್ಯೆಯೊಡನೆ ಅಕಾಡೆಮಿಯ ಕಚೇರಿ ಮೊಬೈಲ್ ಸಂಖ್ಯೆ ೮೭೬೨೯೪೨೯೭೬ ಗೆ ಕಳುಹಿಸುವುದು ಇಲ್ಲವೇ ಲಿಖಿತವಾಗಿ ಪತ್ರ ಮುಖೇನ ಅಧ್ಯಕ್ಷರು/ ರಿಜಿಸ್ಟಾçರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಜೂನಿಯರ್ ಕಾಲೇಜು ರಸ್ತೆ, ಸ್ಕೌಟ್ಸ್ ಭವನ, ಮಡಿಕೇರಿ ಈ ವಿಳಾಸಕ್ಕೆ ಕಳುಹಿಸು ವಂತೆ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ತಿಳಿಸಿದ್ದಾರೆ.

ಅಂತೆಯೇ, ಈಗಾಗಲೇ ಅಕಾಡೆಮಿಯಲ್ಲಿ ದುಡಿ, ತಾಳ, ಕೊಂಬು, ಧೋಳ್, ಒಡಿಕತ್ತಿಗಳಂತ ಪರಿಕರಗಳಿಗೆ ಹೆಸರು ನೋಂದಾಯಿಸಿ ಕೊಂಡಿರುವ ಕುಟುಂಬಗಳಲ್ಲಿ ಕಡ್ಡಾಯವಾಗಿ ‘ಒಕ್ಕೊರ್ಮೆ’ ನಡೆಸುವುದರ ಮೂಲಕ ಪರಿಕರಗಳನ್ನು ಕೊಡುವಂತೆ ತೀರ್ಮಾನಿಸ ಲಾಗಿರುವುದರಿಂದ ಹಾಗೂ ಮುಂದಿನ ದಿನಗಳಲ್ಲಿ ದುಡಿ, ತಾಳಗಳಂತ ಪರಿಕರ ಬಯಸುವ ಕುಟುಂಬಸ್ಥರು ತಮ್ಮ ತಮ್ಮ ಕುಟುಂಬಗಳಲ್ಲಿ ಅಕಾಡೆಮಿ ವತಿಯಿಂದ ‘ಒಕ್ಕೊರ್ಮೆ’ ನಡೆಸುವಂತೆ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಕೋರಿದ್ದಾರೆ.