ಹೆಚ್.ಕೆ. ಜಗದೀಶ್

ಗೋಣಿಕೊಪ್ಪಲು, ಅ.೧೧: ೪೬ ವರ್ಷಗಳ ಇತಿಹಾಸ ಹೊಂದಿರುವ ಗೋಣಿಕೊಪ್ಪ ದಸರಾ ಜನೋತ್ಸವ ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಈ ಬಾರಿಯೂ ವಿಜಯದಶಮಿಯಂದು ನಡೆಯುವ ದಶಮಂಟಪ ಶೋಭಾಯಾತ್ರೆ, ಸ್ತಬ್ಧಚಿತ್ರ ಕಾರ್ಯಕ್ರಮಗಳಿಗೆ ಸಹಸ್ರ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಇದೆ.

ವಿಶ್ವ ಖ್ಯಾತಿಯ ಮೈಸೂರು ದಸರಾ ಹಗಲಿನ ವೈಭವವಾದರೆ, ಮಂಜಿನ ನಗರಿ ಮಡಿಕೇರಿಯ ದಸರಾ ಜನೋತ್ಸವ ಕಾರ್ಗತ್ತಲಿಗೆ ಬೆಳಕಿನ ರಂಗವಲ್ಲಿ ಬರೆಯುತ್ತದೆ. ಇವೆರಡಕ್ಕಿಂತಲೂ ಭಿನ್ನವಾಗಿರುವುದು ಗೋಣಿಕೊಪ್ಪಲು ದಸರಾ. ಹಗಲು ಮತ್ತು ರಾತ್ರಿಯೂ ಕೂಡಾ ಜನರನ್ನು ಗೋಣಿಕೊಪ್ಪದತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಸಂಸ್ಕೃತಿಗಳ ಎಳೆಯೊಡನೆ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮಹತ್ವದ ಉದ್ದೇಶಗಳೊಂದಿಗೆ ಗೋಣಿಕೊಪ್ಪಲು ದಸರಾ ಮೇಳೈಸುತ್ತಿದೆ.

ಜೀವನದಿ ಕಾವೇರಿ ಮಾತೆಯ ಹೆಸರಿನಲ್ಲಿ ೧೯೭೯-೮೦ರಲ್ಲಿ ಗೋಣಿಕೊಪ್ಪಲಿನ ಎಂ.ಜಿ. ಪದ್ಮನಾಭ ಕಾಮತ್ ಮತ್ತು ಸ್ನೇಹಿತರು ಶ್ರೀ ಕಾವೇರಿ ದಸರಾ ಸಮಿತಿ ಎಂಬ ಹೆಸರಿನಲ್ಲಿ ಗೋಣಿಕೊಪ್ಪಲಿನಲ್ಲಿ ದಸರಾ ನಾಡಹಬ್ಬವನ್ನು ಪ್ರಾರಂಭಿಸಿದರು. ಎಂ.ಕೆ.ನAಜಪ್ಪ ಅಧ್ಯಕ್ಷತೆಯಲ್ಲಿ ಬೆಳ್ಳಿಹಬ್ಬ ಆಚರಿಸಿಕೊಂಡು ಇಂದು ೪೬ನೇ ವರ್ಷಕ್ಕೆ ಕಾಲಿಟ್ಟಿದೆ.

ಗೋಣಿಕೊಪ್ಪಲಿನಲ್ಲಿ ಅಂದಿನ ಪುರಸಭೆಯ ಸಭಾಂಗಣದಲ್ಲಿ ದೇವಿ ಶಾರದಾಂಬೆಯ ಸ್ಥಾಪನೆಯೊಂದಿಗೆ ದಸರಾ ಉತ್ಸವವನ್ನು ಆರಂಭಿಸಲಾಯಿತು. ಇದೀಗ ನಾಡಹಬ್ಬ ದಸರಾ ಜನೋತ್ಸವವಾಗಿ ಬದಲಾಗಿ ಹತ್ತಾರು ಕಾರ್ಯಕ್ರಮಗಳ ಮೂಲಕ ಮನಗೆದಿದ್ದೆ.

ಮಧ್ಯಾಹ್ನ ಸ್ತಬ್ಧಚಿತ್ರ ಆಕರ್ಷಣೆ

ಮಧ್ಯಾಹ್ನ ೨ ಗಂಟೆಯ ನಂತರ ಪಟ್ಟಣದಲ್ಲಿ ನಡೆಯುವ ಸ್ತಬ್ಧಚಿತ್ರ ತನ್ನತ್ತ ಜನರನ್ನು ಸೆಳೆಯುತ್ತದೆ. ಹಲವು ಸಮಿತಿಗಳು ಇದರಲ್ಲಿ ಭಾಗವಹಿಸುತ್ತವೆ. ಸ್ಥಳೀಯ ಸೇರಿದಂತೆ ಜಾಗತಿಕ ಮಟ್ಟದ ವಿಷಯವನ್ನು ನಿರೂಪಿಸಲಾಗುತ್ತದೆ.

ವಾಹನಗಳಲ್ಲಿ ವಿಷಯಗಳನ್ನು ಮರುಸೃಷ್ಟಿ ಮಾಡಿ, ಮನುಷ್ಯರೇ ಸ್ತಬ್ಧಚಿತ್ರದ ಪಾತ್ರಧಾರಿಯಾಗಿ ೪-೫ ಗಂಟೆಗಳ ಕಾಲ ಅಲುಗಾಡೆ ನಿಂತು ಸ್ತಬ್ಧಚಿತ್ರಕ್ಕೆ ಜೀವ ತುಂಬುತ್ತಾರೆ. ಇಲ್ಲಿನ ಆರ್‌ಎಂಸಿ ಆವರಣದಿಂದ ಆರಂಭಗೊಳ್ಳುವ ಸ್ತಬ್ಧಚಿತ್ರ ನಗರದ ಮುಖ್ಯರಸ್ತೆಯಲ್ಲಿ ಸಾಗಿ ಸರಕಾರಿ ಆಸ್ಪತ್ರೆ ಹಿಂಭಾಗ ಕೊನೆಗೊಳ್ಳಲಿದೆ. ಅತ್ಯುತ್ತಮ ಮೂರು ಸ್ತಬ್ಧಚಿತ್ರಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಕಳೆದೆರಡು ವರ್ಷಗಳಿಂದ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ಸರ್ಕಾರದ ವಿವಿಧ ಇಲಾಖೆಯ ಸ್ತಬ್ಧ ಚಿತ್ರವು ಆಗಮಿಸುತ್ತಿದೆ. ಇದರ ಹೊಣೆಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಸಿ. ಅಪ್ಪಣ್ಣ ವಹಿಸಿಕೊಂಡಿದ್ದಾರೆ.

ದಶಮAಟಪ ವೈಭವ

ಪೌರಾಣಿಕ ಕಥಾಸಾರಂಶದ ಹಿನ್ನೆಲೆಯಲ್ಲಿ ನಗರದ ೧೦ ಸಮಿತಿಗಳು ಚಲನವಲನ ಹೊಂದಿರುವ ಮಂಟಪ ರಚಿಸುತ್ತವೆ. ಈ ಬಾರಿಯೂ ವೈಭವದ ಮಂಟಪ ರೂಪಿಸಲು ಸಿದ್ಧತೆ ಅಂತಿಮ ಹಂತದಲ್ಲಿ ಭರದಿಂದ ಸಾಗುತ್ತಿದೆ. ದೇವದಾನವರ ನಡುವಿನ ಯುದ್ಧವನ್ನು ಸಮಿತಿ ಚಲನವಲನದ ಮೂಲಕ ಕಟ್ಟಿಕೊಡುತ್ತದೆ.

ಕಾವೇರಿ ದಸರಾ ಸಮಿತಿ ನವರಾತ್ರಿಯ ಪ್ರಾರಂಭದAದು ಪ್ರತಿಷ್ಠಾಪಿಸುವ ದೇವಿಯ ಮೂರ್ತಿಯನ್ನು ಪ್ರಭಾವಳಿಯ ಮುಂದಿಟ್ಟು, ವಾಲಗದೊಂದಿಗೆ ಸಾಗಿ ಶೋಭಾಯಾತ್ರೆಗೆ ಚಾಲನೆ ದೊರೆಯುತ್ತದೆ. ನಾಡ ಹಬ್ಬ ದಸರಾ ಸಮಿತಿ ಭಾರತಂಭೆಯನ್ನು ಹೊತ್ತೊಯ್ಯುತ್ತದೆ.

ಉಳಿದಂತೆ ಅರುವತ್ತೊಕ್ಕಲು ಗ್ರಾಮದ ಶ್ರೀ ಶಾರದಾಂಭ ದಸರಾ ಸಮಿತಿ, ಹರಿಶ್ಚಂದ್ರಪುರದ ನಮ್ಮ ದಸರಾ ಸಮಿತಿ, ಕೊಪ್ಪದ ಸ್ನೇಹಿತರ ಬಳಗ, ೨ನೇ ವಿಭಾಗದ ಸರ್ವರ ದಸರಾ ಸಮಿತಿ, ೩ನೇ ವಿಭಾಗದ ಯುವ ದಸರಾ ಸಮಿತಿ, ಕಾಫಿಬೋರ್ಡ್ನ ಕಾಡ್ಲಯ್ಯಪ್ಪ ದಸರಾ ಸಮಿತಿ, ಕೈಕೇರಿ ಭಗವತಿ ದಸರಾ ಸಮಿತಿ, ಮಾರ್ಕೆಟ್‌ನ ನವಚೇತನ ದಸರಾ ಸಮಿತಿ, ಮೆರವಣಿಗೆಯಲ್ಲಿ ಸಾಗಿಬರಲಿದೆ. ಈ ನಿಟ್ಟಿನಲ್ಲಿ ದಶಮಂಟಪಗಳು ಸಕಲ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ.

ದಕ್ಷಿಣ ಕೊಡಗಿನ ಜನರು ಸೇರಿದಂತೆ ವಿವಿಧೆಡೆಗಳಿಂದ ಸಹಸ್ರ ಸಂಖ್ಯೆಯಲ್ಲಿ ಈ ಉತ್ಸವ ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಈ ಬಾರಿಯೂ ಹೆಚ್ಚಿನ ಸಂಖ್ಯೆಯ ಜನ ಸೇರುವ ನಿರೀಕ್ಷೆ ಇದೆ. ಈಗಾಗಲೇ ೯ ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಶೋಭಾಯಾತ್ರೆಯೊಂದಿಗೆ ಕಾವೇರಿ ಕಲಾ ವೇದಿಕೆತಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಬೆಳಿಗ್ಗೆ ತನಕ ನಡೆದು ದಸರಾ ಜನೋತ್ಸವಕ್ಕೆ ತೆರೆ ಬೀಳಲಿದೆ.