ಮಡಿಕೇರಿ, ಅ. ೧೧: ಜಿಲ್ಲೆಯಾದ್ಯಂತ ಆಯುಧ ಪೂಜೆ ಸಂಭ್ರಮ ಸಡಗರದೊಂದಿಗೆ ಶ್ರದ್ಧಾಭಕ್ತಿಯೊಂದಿಗೆ ಆಚರಿಸಲಾಯಿತು. ಆಯುಧ, ವಾಹನಗಳಿಗೆ ಪೂಜೆ ಸಲ್ಲಿಸಿದ ಜನರು ಒಳಿತಿಗಾಗಿ ಪ್ರಾರ್ಥಿಸಿದರು.

ಜನೋತ್ಸವ ಮಾದರಿಯಲ್ಲಿ ಸಂಭ್ರಮಕ್ಕೆ ಸಾಕ್ಷಿಯಾದ ಆಯುಧ ಪೂಜೋತ್ಸವ

ಸೋಮವಾರಪೇಟೆ : ಧರ್ಮ, ಜಾತಿ-ಮತಪಂಥವಿಲ್ಲದೇ ಸೋಮವಾರಪೇಟೆ ಭಾಗದಲ್ಲಿ ನಡೆಯುವ ಜನೋತ್ಸವ ಎಂದೇ ಬಿಂಬಿತವಾಗಿರುವ, ಇಲ್ಲಿನ ಮೋಟಾರ್ ಯೂನಿಯನ್ ಆಯೋಜಿಸುವ ಆಯುಧ ಪೂಜೋತ್ಸವ ಸಾವಿರಾರು ಮಂದಿಯ ಭಾಗವಹಿಸುವಿಕೆಯಿಂದ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಯಿತು.

ವಿಜಯದಶಮಿಗೂ ಮುನ್ನಾ ದಿನ ಈ ಭಾಗದಲ್ಲಿ ಜನೋತ್ಸವ ಮಾದರಿಯಲ್ಲಿ ನಡೆಯುವ ಆಯುಧ ಪೂಜೋತ್ಸವವನ್ನು ಜನರ ಉತ್ಸವವನ್ನಾಗಿ ಮಾರ್ಪಡಿಸಿಕೊಂಡು ಕಳೆದ ೪೭ ವರ್ಷಗಳಿಂದಲೂ ಆಚರಿಸಿಕೊಂಡು ಬರುತ್ತಿರುವ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘವು, ಈ ವರ್ಷವೂ ಸಹ ವಿಶೇಷ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯಿತು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಅಳವಡಿಸಿದ್ದ ಬೃಹತ್ ವೇದಿಕೆಯಲ್ಲಿ ಮೂಡಿಬಂದ ಕಾರ್ಯಕ್ರಮಗಳು ಜನಮನಸೂರೆ ಗೊಂಡವು. ಬೆಳಿಗ್ಗೆಯಿಂದ ತಡರಾತ್ರಿಯವರೆಗೂ ಪಟ್ಟಣದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣ ಗೊಂಡಿತ್ತು.

ಆಯುಧ ಪೂಜೋತ್ಸವ ಹಿನ್ನೆಲೆ ಪಟ್ಟಣವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಪಟ್ಟಣದ ಎಲ್ಲಾ ಪ್ರತಿಮೆಗಳನ್ನು ಶುಚಿಗೊಳಿಸಿ, ಸುಣ್ಣಬಣ್ಣ ಬಳಿದು, ತಳಿರು ತೋರಣಗಳಿಂದ ಸಿಂಗರಿಸಿ, ಮಾಲಾರ್ಪಣೆ ನೆರವೇರಿಸಲಾಯಿತು. ಬೆಳಿಗ್ಗೆ ಮೋಟಾರ್ ಯೂನಿಯನ್‌ನ ಕಚೇರಿಯಲ್ಲಿ ತಾಯಿ ಚಾಮುಂಡೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಪೂಜೆ ನೆರವೇರಿಸುವ ಮೂಲಕ ಪ್ರಸಕ್ತ ವರ್ಷದ ಕಾರ್ಯಕ್ರಮಗಳಿಗೆ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಚಾಲನೆ ನೀಡಿದರು.

ನಂತರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಿ, ಖಾಸಗಿ ಬಸ್ ನಿಲ್ದಾಣದ ವೇದಿಕೆಯಲ್ಲಿ ಆಯುಧ ಪೂಜಾ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ಸಾಮರಸ್ಯಕ್ಕೆ ಸಹಕಾರಿ: ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಸಾಮೂಹಿಕವಾಗಿ ಆಚರಣೆಗೊಳ್ಳುವ ಹಬ್ಬಗಳಿಂದ ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ. ಈ ನಿಟ್ಟಿನಲ್ಲಿ ಮೋಟಾರ್ ಯೂನಿಯನ್‌ನಿಂದ ಕಳೆದ ೪೭ ವರ್ಷಗಳಿಂದಲೂ ಜನೋತ್ಸವದಂತೆ ಆಯುಧ ಪೂಜಾ ಸಮಾರಂಭವನ್ನು ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರುಗಳಾದ ಸುಲೈಮಾನ್, ರಾಮಚಂದ್ರ ಸೇರಿದಂತೆ ಸಾಮಾಜಿಕ ಕ್ಷೇತ್ರದ ಸೇವೆಗಾಗಿ ಲೈನ್‌ಮೆನ್ ಸದಾಶಿವ ಜಾದವ್, ಹಾಕಿ ತರಬೇತುದಾರ ಜನಾರ್ಧನ್ ಅವರುಗಳನ್ನು ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಗೆ ತಾಲೂಕು ಮಟ್ಟದಲ್ಲಿ ನೃತ್ಯ ಸ್ಪರ್ಧೆ, ಕಾಲೇಜು ಮತ್ತು ಸಾರ್ವಜನಿಕ ವಿಭಾಗದಲ್ಲಿ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ ನಡೆದು ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು. ಮಧ್ಯಾಹ್ನ ಜೇಸೀ ಮೇದಿಕೆ ಬಳಿಯಲ್ಲಿ ಸಾವಿರಾರು ಮಂದಿಗೆ ಅನ್ನ ಸಂತರ್ಪಣೆ ನೆರವೇರಿತು. ಇದರೊಂದಿಗೆ ಅಲಂಕೃತ ವರ್ಕ್ಶಾಪ್, ವಾಹನಗಳ ಸ್ಪರ್ಧೆ ಯನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ರಾತ್ರಿ ಬೆಂಗಳೂರಿನ ವಿ.ಪಿ.ಆರ್. ಈವೆಂಟ್ಸ್ ತಂಡದಿAದ ಮೂಡಿಬಂದ ಸಂಗೀತ ರಸಮಂಜರಿ ಕಾರ್ಯಕ್ರಮ ಎಲ್ಲರನ್ನೂ ರಂಜಿಸಿತು. ಭಕ್ತಿ ಗೀತೆ, ಚಲನ ಚಿತ್ರಗೀತೆಗಳ ಗಾಯನ ಗಮನ ಸೆಳೆಯಿತು. ತಡರಾತ್ರಿಯವರೆಗೂ ಯುವ ಸಮೂಹ ಸಂಗೀತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿತು. ಕಿರುತೆರೆಯ ಸರಿಗಮಪ, ಕನ್ನಡ ಕೋಗಿಲೆ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ನ ವಿವಿಧ ಕಲಾವಿದರು ಸಂಗೀತ ರಸದೌತಣ ಉಣಬಡಿಸಿದರು.

ಆಯುಧ ಪೂಜೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಟಾರ್ ಯೂನಿಯನ್ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ. ಮಾಜೀ ಅಧ್ಯಕ್ಷ ಕೆ.ಎಂ. ಲೋಕೇಶ್, ಜಿ.ಪಂ. ಮಾಜೀ ಸದಸ್ಯ ಬಿ.ಜೆ. ದೀಪಕ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯ ಬಿ.ಆರ್. ಮಹೇಶ್, ಹಿಂದೂ ಜಾಗರಣಾ ವೇದಿಕೆಯ ಉಮೇಶ್, ಸೂಡಾ ಅಧ್ಯಕ್ಷ ಕೆ.ಎ. ಆದಂ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್, ಕೆಟಿಡಿಓ ಅಧ್ಯಕ್ಷ ವಸಂತ್ ಆಚಾರ್ಯ, ಸಿಆರ್‌ಪಿಎಫ್‌ನ ನಿವೃತ್ತ ಅಧಿಕಾರಿ ಮಂಜುನಾಥ್, ಜೇಸೀ ಮಾಜೀ ಅಧ್ಯಕ್ಷೆ ಎಂ.ಎ. ರುಬೀನಾ, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ, ಸಂಘದ ಪದಾಧಿಕಾರಿಗಳಾದ ಕೆ.ಜಿ. ಸುರೇಶ್, ಎ.ಪಿ. ವೀರರಾಜು, ಭರತ್, ವಿನ್ಸಿ, ರಂಗಸ್ವಾಮಿ, ಸುನಿಲ್ ಹಾನಗಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಗೋಣಿಕೊಪ್ಪಲು: ಅನ್ನದಾನವು ಮಹಾದಾನವಾಗಿದ್ದು ಆ ನಿಟ್ಟಿನಲ್ಲಿ ಮಾರ್ಕೆಟ್ ನವಚೇತನ ದಸರಾ ಸಮಿತಿಯು ಕಳೆದ ೩೬ ವರ್ಷಗಳಿಂದ ಆಯುಧ ಪೂಜಾ ದಿನದಂದು ಉತ್ತಮ ರೀತಿಯಲ್ಲಿ ಸಾವಿರಾರು ನಾಗರಿಕರಿಗೆ ಅನ್ನದಾನ ನಡೆಸುತ್ತಿರುವುದು ಉತ್ತಮ ಕಾರ್ಯ. ಇದು ಮುಂದೆಯೂ ಯಶಸ್ವಿಯಾಗಿ ನಡೆಯುವಂತಾಗಲಿ ಎಂದು ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಆಶಯ ವ್ಯಕ್ತಪಡಿಸಿದರು. ಮಾರ್ಕೆಟ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ವ ಧರ್ಮಿಯನ್ನೊಳಗೊಂಡ ಗೋಣಿಕೊಪ್ಪಲುವಿನ ಮಾರ್ಕೆಟ್ ಆವರಣದ ನವಚೇತನ ದಸರಾ ಸಮಿತಿಯು ಸಾವಿರಾರು ಸಂಖ್ಯೆಯ ಜನರಿಗೆ ಆಯುಧ ಪೂಜಾ ದಿನದಂದು ಅನ್ನಸಂತರ್ಪಣೆ ಮಾಡುವ ಮೂಲಕ ಗುರುತಿಸಿಕೊಂಡ ಸಮಿತಿಯಾಗಿದೆ.

ಸಮಿತಿಯಲ್ಲಿ ಯುವಕರ ತಂಡ ಸಕ್ರಿಯವಾಗಿ ಪಾಲ್ಗೊಂಡು ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ವನ್ನು ರೂಪಿಸುತ್ತಿದೆ. ಮಾರ್ಕೆಟ್ ಆವರಣದ ವ್ಯಾಪಾರಿಗಳಿಂದ ದಾನವಾಗಿ ಪಡೆದ ಹಣದಿಂದ ನಡೆಸಿಕೊಂಡು ಬರುತ್ತಿದ್ದ ಅನ್ನದಾನ ಕಾರ್ಯಕ್ರಮವು ವರ್ಷಂಪ್ರತಿ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಸ್ಥಾಪಕ ಕಾರ್ಯದರ್ಶಿ ಶಾಂತರಾಮ್ ಕಾಮತ್ ತಿಳಿಸಿದರು.

ನವಚೇತನ ದಸರಾ ಸಮಿತಿಯ ಅಧ್ಯಕ್ಷರಾದ ಕರ್ಣರಾಜ್ ತಂಬಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮ ದಲ್ಲಿ ಸ್ಥಾಪಕ ಅಧ್ಯಕ್ಷ ಕುಪ್ಪಂಡ ಗಣೇಶ್ ತಿಮ್ಮಯ್ಯ, ಗ್ರಾ.ಪಂ. ಸದಸ್ಯರು ಗಳಾದ ಬಿ.ಎನ್.ಪ್ರಕಾಶ್, ಸವಿತಾ ಗ್ರಾ.ಪಂ.ಪಿಡಿಓ ತಿಮ್ಮಯ್ಯ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಅಸ್ಗರ್, ಉಪಾಧ್ಯಕ್ಷರು ಗಳಾದ ಸಚಿನ್, ಎಂ.ಆರ್.ರಫೀಕ್, ಶಮೀರ್, ಹಮಾನ್, ಪ್ರದೀಪ್, ಅಬ್ದುಲ್ ಸಮ್ಮದ್, ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು. ಅನ್ನದಾನ ಆರಂಭಕ್ಕೂ ಮುನ್ನ ದಸರಾ ಸಮಿತಿಯ ನೂತನ ಕಚೇರಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾದ ತಿಮ್ಮಯ್ಯ ಉದ್ಘಾಟಿಸಿದರು.

ಮಡಿಕೇರಿ: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜಾ ಸಂಭ್ರಮ ಕಾರ್ಯಕ್ರಮ ನಡೆಯಿತು. ಪೊಲೀಸ್ ಠಾಣೆಯ ಎಲ್ಲಾ ಶಸ್ತಾçಸ್ತçಗಳನ್ನು ಒಟ್ಟುಗೂಡಿಸಿ ಪೂಜಾಕಾರ್ಯ ಹಾಗೂ ಮಹಾಮಂಗಳಾರತಿ ಸೇವೆಯನ್ನು ಕೂಡಿಗೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅರ್ಚಕರಾದ ನವೀನ್ ಭಟ್ ಅವರು ನೆರವೇರಿಸಿದರು.

ಪೂಜಾ ಕಾರ್ಯವನ್ನು ಠಾಣೆಯ ಉಪನಿರೀಕ್ಷಕರಾದ ಮೋಹನ್ ರಾಜ್ ಅವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಅಪರಾಧ ಠಾಣೆಯ ಉಪನಿರೀಕ್ಷಕ ಸ್ವಾಮಿ, ಎಎಸ್‌ಐ ವಿಠಲ್, ಎಎಸ್‌ಐ ಕುಮಾರಿ, ಮಹಿಳಾ ಮುಖ್ಯಪೇದೆ ಕಾಂತಿ, ಜಯಂತಿ, ಪೇದೆಗಳಾದ ಶಿವರಾಜ್, ಶಿವಣ್ಣ ನವೀನ್ ಕುಮಾರ್, ಗುಣ, ಹರ್ಷಿತ್ ಸಿಬ್ಬಂದಿ ವರ್ಗ ಹಾಜರಿದ್ದರು.

ಶನಿವಾರಸಂತೆ : ಪಟ್ಟಣದ ತ್ಯಾಗರಾಜ ಕಾಲೋನಿಯ ಶ್ರೀಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನದಲ್ಲಿ ಶುಕ್ರವಾರ ಬೆಳಿಗ್ಗೆ ನವರಾತ್ರಿಯ ೯ ನೇ ದಿನ ಮಹಾನವಮಿಯ ನವದುರ್ಗೆಯರ ೯ನೇ ಸ್ವರೂಪ ಶ್ರೀ ಸಿದ್ಧಧಾತ್ರಿ ದೇವಿಯ ಆರಾಧನೆ ಹಾಗೂ ಆಯುಧ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿದವು.

ಭಕ್ತಾದಿಗಳು ಶ್ರೀ ಸಿದ್ಧಿಧಾತ್ರಿ ದೇವಿ, ಚಾಮುಂಡೇಶ್ವರಿ ದೇವಿ ಮತ್ತು ಗುಳಿಗ ದೈವಕ್ಕೆ ಎಳನೀರು, ಹೂಗಳು, ಹಣ್ಣುಕಾಯಿ, ನೈವೇದ್ಯ ಸಮರ್ಪಿಸಿ, ನಿಂಬೆಹಣ್ಣಿನ ದೀಪದಾರತಿ ಬೆಳಗಿದರು.ಅರ್ಚಕ ಪ್ರಕಾಶ್ಚಂದ್ರ ಸುವರ್ಣ ಪೂಜಾ ವಿಧಿ ನೆರವೇರಿಸಿದರು. ಮಹಾಮಂಗಳಾರತಿ ನಂತರ ತೀರ್ಥ-ಪ್ರಸಾದ ವಿನಿಯೋಗ ನಡೆದು, ನವರಾತ್ರಿಯ ವ್ರತಾಚರಣೆಯೊಂದಿಗೆ ೯ ನೇ ದಿನದ ಮಹಾನವಮಿ ಪೂಜಾ ಕಾರ್ಯ ಸಂಪನ್ನವಾಯಿತು.ಶನಿವಾರಸAತೆ : ಸಮೀಪದ ಕೊಡ್ಲಿಪೇಟೆಯ ಶ್ರೀರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ ಮಹಾನವಮಿ ಪ್ರಯುಕ್ತ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು.

ರಾತ್ರಿ ಸಾಮೂಹಿಕ ಪ್ರಾರ್ಥನೆ, ದುರ್ಗಾ ಕಲ್ಪೋಕ್ತಪೂಜೆ, ರಂಗಪೂಜೆ, ದುರ್ಗಾ ಹೋಮ, ಕನ್ಯಾ ಪೂಜೆ, ಸುಹಾಸಿನೀ ಆರಾಧನೆ ನಡೆಯಿತು. ಶ್ರೀಕ್ಷೇತ್ರದ ಅರ್ಚಕ ಮಹಾಬಲೇಶ್ವರ ಜೋಷಿ ಪೂಜಾ ವಿಧಿ ನೆರವೇರಿಸಿದರು. ಮಹಾಮಂಗಳಾರತಿಯಾಗಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷರು, ನಿರ್ದೇಶಕರು, ಸದಸ್ಯರು ಹಾಗೂ ಚೌಡೇಶ್ವರಿ ಮಹಿಳಾ ಬಳಗದ ಅಧ್ಯಕ್ಷೆ ಹಾಗೂ ಸದಸ್ಯರು ಹಾಜರಿದ್ದರು.

ಕೂಡಿಗೆ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿರುವ ಕೈಸಾಲ್ ಕಾಮೋಡೋಟಿಸ್ ಕಾಫಿ ಸಂಸ್ಕರಣಾ ಕೇಂದ್ರದಲ್ಲಿ ಆಯುಧ ಪೂಜಾ ಪ್ರಯುಕ್ತ ಘಟಕದ ಆವರಣದಲ್ಲಿ ಕಾರ್ಮಿಕರಿಗೆ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತು.

ಇದರಲ್ಲಿ ವಿಶೇಷವಾಗಿ ಪುರುಷ ಕಾರ್ಮಿಕರು ೭೫. ಕೆ.ಜಿ. ತೂಕದ ಕಾಫಿ ಚೀಲವನ್ನು ಹೆಗಲಿಗೆರಿಸಿಕೊಂಡು ೧೫೦. ಮೀಟರ್ ಓಡುವ ಸ್ಪರ್ಧೆ ನಡೆಯಿತು. ಗೆದ್ದವರಿಗೆ ಪ್ರಥಮ ಬಹುಮಾನವಾಗಿ ೫ ಸಾವಿರ, ದ್ವಿತೀಯ ಬಹುಮಾನ ೩ ಸಾವಿರ, ತೃತೀಯ ಬಹುಮಾನ ೨ ಸಾವಿರವನ್ನು ವ್ಯವಸ್ಥಾಪಕ ಸುದೀಪ್ ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳಾ ಕಾರ್ಮಿಕರಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಆಯುಧ ಪೂಜಾ ಕೈಂಕರ್ಯಗಳು ಸಹ ನಡೆದವು.

ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಕ್ರೀಡಾ ತರಬೇತುದಾರ ಬಿ.ಟಿ. ಪೂರ್ಣೇಶ್ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಶನಿವಾರಸಂತೆ: ಪಟ್ಟಣದ ತ್ಯಾಗರಾಜ ಕಾಲೋನಿಯ ಶ್ರೀಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಬನದಲ್ಲಿ ಗುರುವಾರ ಬೆಳಿಗ್ಗೆ ಶರನ್ನವರಾತ್ರಿಯ ೮ ನೇ ದಿನ ನವದುರ್ಗೆಯರ ದುರ್ಗಾಷ್ಟಮಿ ಸ್ವರೂಪ ಶ್ರೀ ಮಹಾಗೌರಿ ದೇವಿಯ ಆರಾಧನಾ, ಪೂಜಾ ಕೈಂಕರ್ಯ ಶ್ರದ್ಧಾಭಕ್ತಿಯಿಂದ ನೆರವೇರಿತು.

ಭಕ್ತಾದಿಗಳು ಶ್ರೀ ಮಹಾಗೌರಿ ದೇವಿ, ಚಾಮುಂಡೇಶ್ವರಿ ದೇವಿ ಮತ್ತು ಗುಳಿಗ ದೈವಕ್ಕೆ ಎಳನೀರು, ವಿಧವಿಧದ ಹೂಗಳು, ಹಣ್ಣುಕಾಯಿ, ನೈವೇದ್ಯ ಸಮರ್ಪಿಸಿ, ನಿಂಬೆಹಣ್ಣಿನ ದೀಪದಾರತಿ ಬೆಳಗಿದರು. ಅರ್ಚಕ ಪ್ರಕಾಶ್ಚಂದ್ರ ಸುವರ್ಣ ಪೂಜಾ ವಿಧಿ ನೆರವೇರಿಸಿದರು. ಮಹಾಮಂಗಳಾರತಿ ನಂತರ ತೀರ್ಥ-ಪ್ರಸಾದ ವಿನಿಯೋಗ ನಡೆದು, ದುರ್ಗಾಷ್ಟಮಿ ಪೂಜಾ ಕಾರ್ಯ ಸಂಪನ್ನವಾಯಿತು.ಗುಡ್ಡೆಹೊಸೂರು: ಇಲ್ಲಿನ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆಯ ಅಂಗವಾಗಿ ಇಲ್ಲಿನ ಗೌಡ ಸಮಾಜದ ವತಿಯಿಂದ ೯ ದಿನಗಳ ಕಾಲ ಪೂಜೆ ನೆರವೇರಿಸಲಾಯಿತು. ೯ ದಿನಗಳ ಕಾಲ ಸಮಾಜದ ಸದಸ್ಯರು ಮತ್ತು ಆಡಳಿತ ಮಂಡಳಿ ಮತ್ತು ಗ್ರಾಮಸ್ಥರ ಸಹಕಾರದಲ್ಲಿ ಆದ್ದೂರಿಯಾಗಿ ಪೂಜೆ ನಡೆಸಲಾಯಿತು.

ಪ್ರತಿದಿನ ರಾತ್ರಿ ೭ ಗಂಟೆಯಿAದ ದೇವಸ್ಥಾನದಲ್ಲಿ ಗ್ರಾಮಸ್ಥರಿಂದ ಭಜನೆ ಕಾರ್ಯಕ್ರಮ ನಡೆದು ದಾನಿಗಳ ಸಹಕಾರದಲ್ಲಿ ರಾತ್ರಿ ಸಾರ್ವಜನಿಕರಿಗೆ ಅನ್ನಸಂತರ್ಪಣ ಕಾರ್ಯ ನಡೆಯಿತು. ದೇವಸ್ಥಾನದ ಅರ್ಚಕರಾದ ನಡುಮನೆ ಸತ್ಯ ಅವರು ಪೂಜಾಕಾರ್ಯವನ್ನು ನಡೆಸಿದರು. ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಶ್ರೀ ರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ ಅಮ್ಮನವರಿಗೆ ಅಭಿಷೇಕ, ವಿಶೇಷ ಅಲಂಕಾರ ಮಾಡಿ, ದುರ್ಗಾ ಕಲ್ಪೋಕ್ತಪೂಜೆ , ದೀಪಾರಾಧನೆ ಮಾಡಿ ಪೂಜಿಸಲಾಯಿತು.

ರಾತ್ರಿ ಮಹಿಳೆಯರಿಂದ ದೇವಿಗೆ ದೀಪಾರತಿ, ಸಾಮೂಹಿಕ ದುರ್ಗಾರತಿ ನಡೆಯಿತು. ಶ್ರೀಕ್ಷೇತ್ರದ ಅರ್ಚಕ ಮಹಾಬಲೇಶ್ವರ ಜೋಷಿ ಪೂಜಾ ವಿಧಿ ನೆರವೇರಿಸಿದರು. ಮಹಾಮಂಗಳಾರತಿಯಾಗಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಚೌಡೇಶ್ವರಿ ಮಹಿಳಾ ಬಳಗದ ಪದಾಧಿಕಾರಿಗಳು ಹಾಜರಿದ್ದರು.