ಗೋಣಿಕೊಪ್ಪಲು, ಅ. ೧೧: ಪ್ರಕೃತಿಯ ಕಾಳಜಿ, ಸಾಮಾಜಿಕ ಕಳಕಳಿ ಹೊಂದಿರುವ ಕವಿತೆಗಳನ್ನು ೭೦ ಕ್ಕೂ ಹೆಚ್ಚು ಕವಿಗಳು ವಾಚಿಸುವ ಮೂಲಕ ಗಮನ ಸೆಳೆದರು.

೪೬ನೇ ವರ್ಷದ ಶ್ರೀ ಕಾವೇರಿ ದಸರಾ ಸಮಿತಿ ಆಚರಿಸುವ ಜನೋತ್ಸವದ ಅಂಗವಾಗಿ ಕಾವೇರಿ ಕಲಾ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ದಸರಾ ಸಮಿತಿ ಆಯೋಜಿಸಿದ ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿ ನಡೆಯಿತು.

ಸುತ್ತಲಿನ ಪರಿಸರಗಳ ಬಗ್ಗೆ ಹೆಚ್ಚು ಕವನಗಳನ್ನು ಕವಿಗಳು ವಾಚಿಸಿದರು. ಸುಮಾರು ೧೩ ಭಾಷೆಗಳಲ್ಲಿ ಕಾವ್ಯ ವಾಚನ ಸುದೀರ್ಘವಾಗಿ ನಡೆಯಿತು. ಕವಿಗೋಷ್ಟಿಯನ್ನು ಅಖಿಲ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಉದ್ಘಾಟಿಸಿದರು. ನಾಗೇಶ್ ಕಾಲೂರು ಅಧ್ಯಕ್ಷತೆಯಲ್ಲಿ ಕವಿಗಳು ಕಾವ್ಯ ವಾಚನ ಮಾಡಿದರು.

ಕವಿಗಳು ಸಮಾಜದ ಸೂಕ್ಷö್ಮತೆಯನ್ನು ಅರಿತುಕೊಂಡು ಕವಿತೆ ರಚಿಸಬೇಕು. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ನಮ್ಮ ಸುತ್ತಲು ನಡೆಯುವ ವಿಚಾರಗಳನ್ನು ಗ್ರಹಿಸಿ ಕಾವ್ಯ ರಚಿಸಿದರೆ ಉತ್ತಮ ಕವಿತೆಗಳು ಕಟ್ಟಲು ಸಾದ್ಯವಾಗಬಲ್ಲದು. ಸಮಾಜದ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಕವಿತೆಗಳು ಹುಟ್ಟಿಕೊಳ್ಳಬೇಕಾಗಿದೆ. ಜಾತಿ, ಧರ್ಮಗಳಾಚೆ ನಿಂತು ಕವಿತೆ ಕಟ್ಟುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ನಾಗೇಶ್ ಕಾಲೂರು ತಿಳಿಸಿದರು.

ಸಮಾಜವನ್ನು ಕಟ್ಟುವ ಜವಾಬ್ದಾರಿಯಲ್ಲಿ ಕವಿಗಳ ಪಾತ್ರವೂ ಇದೆ. ಸಮಕಾಲಿನ ಸಮಸ್ಯೆಗಳ ಬಗ್ಗೆ ಧ್ವನಿಯಾಗುವ ಕವಿತೆಗಳು ರಚನೆಯಾಗಬೇಕು. ಕವಿತೆಗಳನ್ನು ಬರಹದಷ್ಟೇ ಚಂದವಾಗಿ ವಾಚಿಸುವ ಕಲೆಯನ್ನು ತಿಳಿದಾಗ ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಲಿದೆ ಎಂದು ಸಾಹಿತಿ ಡಾ. ಜೆ. ಸೋಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ, ಸಾಹಿತ್ಯ ಪರಿಷತ್ತಿನ ವಿವಿಧ ಕಾರ್ಯಕ್ರಮಗಳಲ್ಲಿ ಅವಕಾಶ ಸಿಗಬೇಕಾದರೆ ಪರಿಷತ್ತಿನ ಸದಸ್ಯರಾಗಿ ಎಂದು ಕರೆ ನೀಡಿದರು.

ಪೊನ್ನಂಪೇಟೆ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಳೆರ ದಯಾಚಂಗಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಕಾರ್ಯದರ್ಶಿ ಕಂದಾ ದೇವಯ್ಯ, ಕವಿಗೋಷ್ಟಿ ಸಮಿತಿ ಸಂಚಾಲಕಿ ರಜಿನಿ, ಪ್ರಧಾನ ಕಾರ್ಯದರ್ಶಿ ಶೀಲಾ ಬೋಪಣ್ಣ, ಸಂಯೋಜಕ ಚಂದನ್ ಕಾಮತ್, ಚಂದನ, ವಾಮನ, ವಿನೋದ್, ರಾಮಕೃಷ್ಣ ಇದ್ದರು. ಉಳುವಂಗಡ ಕಾವೇರಿ ಉದಯ ಅವರ ಲೇಖನ ಸೌರಭ ಪುಸ್ತಕ ಅನಾವರಣ ಈ ಸಂದರ್ಭ ನೆರವೇರಿತು.