ಕೂಡಿಗೆ, ಅ. ೧೧: ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿರುವ ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂ.ವಿ. ಜಿಸ್ನಳಿಗೆ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಎಂ.ವಿ. ಜಿಸ್ನ ಡಿಸ್ಕಸ್ ಎಸೆತ, ಭಾರದ ಗುಂಡು ಎಸೆತ ಹಾಗೂ ಹ್ಯಾಮರ್ ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾಳೆ. ವಿದ್ಯಾರ್ಥಿನಿ ಜಿಸ್ನಳಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಎ.ಜೆ. ಚಂದ್ರಾವತಿ ತರಬೇತಿ ನೀಡಿರುತ್ತಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ಬಿ.ಎನ್. ಪುಷ್ಪ ತಿಳಿಸಿ ದ್ದಾರೆ. ಅಭಿನಂದನಾ ಸಮಾರಂಭದಲ್ಲಿ ಜೆಸಿಐ ಸಂಸ್ಥೆಯ ಎಸ್.ಎಂ.ಎ. ವಿಭಾಗದ ವಲಯಾ ಧ್ಯಕ್ಷ ಎಂ.ಡಿ. ರಂಗಸ್ವಾಮಿ ಮಾತನಾಡಿ, ವಿದ್ಯಾರ್ಥಿನಿ ಜಿಸ್ನಳ ಉತ್ತಮ ಸಾಧನೆಯು ಇತರೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತದೆ ಎಂದರು. ಮುಖ್ಯ ಶಿಕ್ಷಕಿ ಬಿ.ಎನ್. ಪುಷ್ಪ, ಕಾವೇರಿ ಜೆ.ಸಿ.ಐ. ಸಂಸ್ಥೆಯ ಅಧ್ಯಕ್ಷ ಜಗದೀಶ್, ನಿಕಟ ಪೂರ್ವ ಅಧ್ಯಕ್ಷ ಎಂ.ಜೆ. ರಜನಿ ಕಾಂತ್, ಮಾಜಿ ಅಧ್ಯಕ್ಷ ನಾಗೇಗೌಡ, ಪ್ರೌಢಶಾಲಾ ಶಿಕ್ಷಕರ ಸಂಘದ ಮೈಸೂರು ವಿಭಾಗದ ಉಪಾಧ್ಯಕ್ಷ ಪಿ.ನವೀನ್ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕಿ ಎ.ಜೆ. ಚಂದ್ರಾವತಿ ಹಾಗೂ ಶಿಕ್ಷಕರು ಇದ್ದರು. ವಿದ್ಯಾರ್ಥಿನಿ ಜಿಸ್ನ, ವಿ.ಪಿ. ವಿದ್ಯಾ ಮತ್ತು ಎಂ.ಜೆ. ವಿಜು ದಂಪತಿಯ ಪುತ್ರಿ.