ಮಡಿಕೇರಿ, ಅ. ೧೧: ತಾ. ೧೨ ರಂದು (ಇಂದು) ಮಡಿಕೇರಿಯಲ್ಲಿ ನಡೆಯಲಿರುವ ದಶಮಂಟಪ ಶೋಭಾಯಾತ್ರೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ವ್ಯವಸ್ಥಿತವಾಗಿ ಆಚರಣೆ ನಡೆಸುವ ನಿಟ್ಟಿನಲ್ಲಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಡಿಕೇರಿ ದಸರಾ ದಶಮಂಟಪ ಸಮಿತಿ ಪ್ರಮುಖರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಶಮಂಟಪ ಸಮಿತಿ ಅಧ್ಯಕ್ಷ ಜಿ.ಸಿ. ಜಗದೀಶ್ ಕಳೆದ ಬಾರಿ ಆದ ನ್ಯೂನತೆ, ಗೊಂದಲಗಳು ಈ ಬಾರಿ ಆಗಬಾರದೆಂದು ಕೆಲವೊಂದು ಕ್ರಮವಹಿಸಲಾಗಿದೆ. ಈ ಬಾರಿ ಸೀಮಿತ ಧ್ವನಿವರ್ಧಕ ಬಳಸಲಾಗುತ್ತಿದೆ. ಡಿಜೆ ನಿಯಂತ್ರಣ ಹಾಕಲಾಗಿದ್ದು, ೧೨ ಸೌಂಡ್ ಬಾಕ್ಸ್ ಬಳಕೆಯಾಗಲಿದ್ದು, ವಾಲಗ, ಬ್ಯಾಂಡ್ ಸೆಟ್‌ನಂತಹ ಸಾಂಪ್ರದಾಯಕ ಕಾರ್ಯಕ್ರಮವನ್ನು ನಡೆಸಲು ಮಂಟಪ ಸಮಿತಿಗಳು ಮನಸ್ಸು ಮಾಡಿವೆ. ಸಿಡಿಮದ್ದು, ಲೇಸರ್ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ ಎಂದ ಅವರು, ಈ ಬಾರಿ ಸರಕಾರದಿಂದ ಹೆಚ್ಚಿನ ಅನುದಾನ ಬಂದಿರುವ ಹಿನ್ನೆಲೆ ಮಂಟಪಕ್ಕೆ ತಲಾ ರೂ. ೬ ಲಕ್ಷ, ಕರಗಗಳಿಗೆ ತಲಾ ರೂ. ೩ ಲಕ್ಷ ಅನುದಾನ ನೀಡುವಂತೆ ಮನವಿ ಮಾಡಿದರು.

ಪ್ರಧಾನ ಕಾರ್ಯದರ್ಶಿ ಯೋಗೇಶ್ ಮಾತನಾಡಿ, ಮಂಟಪಗಳ ಟ್ರಾö್ಯಕ್ಟರ್‌ನ ಮುಂಭಾಗ ಅಗಲ ೨೫ ಅಡಿ, ಉದ್ದ ೬೦ ರಿಂದ ೭೦ ಅಡಿಗಳಿರಬೇಕು. ತೀರ್ಪುಗಾರರ ಪ್ರದರ್ಶನ ವೇಳೆ ಸಮಯ ಪಾಲನೆ ಮಾಡಬೇಕು, ಇಲ್ಲದಿದ್ದಲ್ಲಿ ಅಂಕ ಕಡಿತಗೊಳಿಸಲಾಗುವುದು, ಪ್ರತಿ ಮಂಟಪಗಳು ಕಡ್ಡಾಯವಾಗಿ ಬನ್ನಿಮಂಟಪಕ್ಕೆ ತೆರಳಬೇಕೆಂದರು.

ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಜಗದೀಶ್ ಮಾತನಾಡಿ, ಕಥಾಸಾರಂಶ-ಕಲಾಕೃತಿ, ಪ್ರಭಾವಳಿ - ಸ್ಟುಡಿಯೋ, ಚಲನವಲನ-ಟ್ರಾö್ಯಕ್ಟರ್ ಸೆಟ್ಟಿಂಗ್, ಧ್ವನಿಮುದ್ರಣ-ಶುಚಿತ್ವ ಈ ಹಂತಗಳಿಗೆ ಪ್ರತ್ಯೇಕವಾಗಿ ತೀರ್ಪುಗಾರರು ಅಂಕ ನೀಡಲಿದ್ದಾರೆ. ಈ ಬಾರಿ ನಿಷ್ಪಕ್ಷಪಾತವಾಗಿ, ಯಾವುದೇ ಗೊಂದಲ ಉಂಟಾಗದAತೆ ತೀರ್ಪುಗಾರಿಕೆ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ಪ್ರಭು ರೈ ಮಾತನಾಡಿ, ಮಂಟಪಗಳು ಹೆಚ್ಚು ಪ್ರದರ್ಶನ ನೀಡುವಂತೆ ಸಮಿತಿಗಳಿಗೆ ತಿಳಿಸಲಾಗಿದೆ ಎಂದರು.

ಮತ್ತೋರ್ವ ಉಪಾಧ್ಯಕ್ಷ ಡಿಶು ಮಾತನಾಡಿ, ಮಂಟಪವನ್ನು ತೀರ್ಪುಗಾರಿಕೆ ಸಮಯದಲ್ಲಿ ನಿಲ್ಲಿಸಲು ಮಾರ್ಕಿಂಗ್ ಮಾಡಲಾಗಿದೆ ಎಂದರು.

ಖಜಾಂಜಿ ಸದಾ ಮುತ್ತಪ್ಪ ಮಾತನಾಡಿ, ನಿಯಮವನ್ನು ಸಮಿತಿಗಳು ಕಡ್ಡಾಯವಾಗಿ ಪಾಲಿಸಿ, ದಸರಾ ಯಶಸ್ವಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.