ಮಡಿಕೇರಿ, ಅ. ೧೧: ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಡಿಕೇರಿಗೆ ಆಗಮಿಸಿ ನಾಲ್ಕು ಶಕ್ತಿ ದೇವತೆಗಳು ಸೇರಿದಂತೆ ದಶಮಂಟಪಗಳ ದೇವಾಲಯಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.

ಕರಗದೇವತೆಗಳ ಪೈಕಿ ಪ್ರಮುಖ ದೇವತೆಯಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯಕ್ಕೆ ಮೊದಲು ಆಗಮಿಸಿ ಪೂಜೆ ಸಲ್ಲಿಸಿದರು. ನಂತರ ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕೋಟೆ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ಕೋಟೆ ಗಣಪತಿ, ಪೇಟೆ ಶ್ರೀರಾಮ ಮಂದಿರ, ಶ್ರೀ ಕೋದಂಡ ರಾಮ ಮಂದಿರ, ಶ್ರೀ ಕರವಲೆ ಭಗವತಿ ಮಹಿಷ ಮರ್ಧಿನಿ, ಶ್ರೀ ಚೌಡೇಶ್ವರಿ, ದೇಚೂರು ಶ್ರೀ ವಿದ್ಯಾಗಣಪತಿ ರಾಮಮಂದಿರ ಹಾಗೂ

ಶ್ರೀ ವಿಜಯ ವಿನಾಯಕ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ಆಯುಧ ಪೂಜೆ ಹಾಗೂ ವಿಜಯದಶಮಿಯ ಈ ಶುಭ ಸಂದರ್ಭದಲ್ಲಿ ಮಾತೆ ಕಾವೇರಿ ಹಾಗೂ ಶ್ರೀ ದುರ್ಗಾಮಾತೆ ಸರ್ವರಿಗೂ ಸನ್ಮಂಗಳ ಉಂಟುಮಾಡಲಿ ಎಂದು ಪ್ರಾರ್ಥಿಸಿದರು.

ನಾಡಿನಲ್ಲಿ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿರುವುದರಿಂದ ರೈತರಲ್ಲಿ ಸಂತಸ ಮೂಡಿಸಿದೆ ಎಂದು ಅಭಿಪ್ರಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ಶಾಸಕರಾದ ಎ.ಎಸ್. ಪೊನ್ನಣ್ಣ, ಶಾಸಕ ಡಾ. ಮಂತರ್‌ಗೌಡ, ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಪದಾಧಿಕಾರಿಗಳಾದ

ಎಂ. ಲಕ್ಷö್ಮಣ್,

(ಮೊದಲ ಪುಟದಿಂದ) ಕೆ.ಪಿ. ಚಂದ್ರಕಲಾ, ಟಿ.ಪಿ. ರಮೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಬಿ.ವೈ. ರಾಜೇಶ್, ಪದಾಧಿಕಾರಿಗಳು, ಕಾಂಗ್ರೆಸ್ ಪಕ್ಷದ ಪ್ರಮುಖರು ಇದ್ದರು.

ದೇವಾಲಯಗಳ ಸಮಿತಿ ಪದಾಧಿಕಾರಿಗಳು ಉಪಮುಖ್ಯಮಂತ್ರಿಗಳನ್ನು ಸನ್ಮಾನಿಸಿ, ಗೌರವಿಸಿದರು.