ವೀರಾಜಪೇಟೆ, ಅ. ೧೧: ಮೈಸೂರು ವಿಭಾಗಮಟ್ಟದ ಬಾಲಕರ ಕ್ರಿಕೆಟ್ ಪಂದ್ಯಾಟ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆಯಿತು. ಪಂದ್ಯಾಟದಲ್ಲಿ ಭಾಗವಹಿಸಿದ್ದ ಕೊಡಗು ಜಿಲ್ಲಾ ೧೪ ವರ್ಷ ಒಳಗಿರುವ ಬಾಲಕರ ತಂಡವು ಹಾಸನ ತಂಡವನ್ನು ಮಣಿಸಿ ಜಯಭೇರಿ ಬಾರಿಸಿತು.

ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಮೈಸೂರು ವಿಭಾಗ ಮಟ್ಟದ ೧೪ ವರ್ಷ ಒಳಗಿರುವ ಮತ್ತು ೧೭ ವರ್ಷ ಒಳಗಿರುವ ಬಾಲಕರ ಕ್ರಿಕೆಟ್ ಪಂದ್ಯಾಟಗಳು ಉಡುಪಿ ಜಿಲ್ಲೆಯ ಬ್ರಹ್ಮಾವರ ಶಾರದಾ ಶಾಲೆಯ ಮೈದಾನದಲ್ಲಿ ಅಯೋಜಿಸಿತು.

ಕ್ರಿಕೆಟ್ ಪಂದ್ಯಾಟದಲ್ಲಿ ಜಿಲ್ಲೆಯ ಪ್ರತಿತಂಡಕ್ಕೆ ೧೦ ಓವರ್ ನೀಡಲಾಗಿತ್ತು. ಪ್ರತಿ ತಂಡಕ್ಕೆ ಮೂರು ಸುತ್ತುಗಳ ಪಂದ್ಯಾಟ ನಿಗದಿಗೊಳಿಸಿ. ಕೊಡಗು ಜಿಲ್ಲಾ ತಂಡವು ತನ್ನ ಮೊದಲ ಸುತ್ತಿನಲ್ಲಿ ಮಂಡ್ಯ ಜಿಲ್ಲೆಯ ತಂಡವನ್ನು ಸೋಲಿಸಿ ಎರಡನೆ ಸುತ್ತಿಗೆ ಆರ್ಹತೆ ಪಡೆಯಿತು. ಸೆಮಿಫೈನಲ್ ಪಂದ್ಯದಲ್ಲಿ ತನ್ನ ಎದುರಾಳಿ ಐದು ಬಾರಿ ಚಾಂಪಿಯನ್‌ಪಟ್ಟ ಅಲಂಕರಿಸಿದ ಉಡುಪಿ ಜಿಲ್ಲಾ ತಂಡವನ್ನು ಉತ್ತಮ ಪ್ರದರ್ಶನ ತೋರುವ ಮೂಲಕ ಮಣಿಸಿ ಫೈನಲ್‌ಗೆ ಅರ್ಹತೆ ಪಡೆಯಿತು. ಫೈನಲ್ ಪಂದ್ಯಾಟ ಹಾಸನ ಜಿಲ್ಲಾ ತಂಡ ಮತ್ತು ಕೊಡಗು ಜಿಲ್ಲಾ ತಂಡದ ಮಧ್ಯೆ ನಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಅಯ್ಕೆ ಮಾಡಿಕೊಂಡ ಕೊಡಗು ಜಿಲ್ಲಾ ತಂಡವು ೧೦ ಓವರುಗಳಲ್ಲಿ ತನ್ನ ಮೂರು ವಿಕೆಟ್ ಕಳೆದುಕೊಂಡು ೧೪೫ ರನ್ ಪಡೆದುಕೊಂಡಿತು. ತಂಡದ ಪರವಾಗಿ ವೃತುನ್ ೨೪ ಬಾಲ್‌ನಲ್ಲಿ ೭೦ ರನ್, ಯಶಸ್ಸ್ ೧೬ ಬಾಲ್‌ನಲ್ಲಿ ೩೬ ರನ್ ಮತ್ತು ಸೋಮಣ್ಣ ೧೭ ಬಾಲ್ ಗಳಲ್ಲಿ ೧೬ ರನ್ ಪಡೆದುಕೊಂಡು ಉತ್ತಮ ಪ್ರದರ್ಶನ ನೀಡಿದರು.

ಹಾಸನ ತಂಡದ ಪರವಾಗಿ ಗೌತಮ್ ೪೧, ಹರ್ಷ ೩೧ ಮತ್ತು ರುಷೀಲ್ ೩೦ ರನ್ ಗಳಿಸಿದರು. ಕೊಡಗು ತಂಡ ತನ್ನ ಕರಾರುವಾಕ್ಕಾದ ಧಾಳಿ ನಡೆಸಿ ೧೦ ಓವರ್‌ಗಳಲ್ಲಿ ೦೪ ವಿಕೆಟ್ ಪಡೆದು ೧೧೩ ರನ್ ನೀಡುವಲ್ಲಿ ಶಕ್ತರಾದರು. ಒಟ್ಟು ೩೨ ರನ್ ಗಳಿಂದ ಕೊಡಗು ಜಿಲ್ಲಾ ತಂಡ ಜಯಗಳಿಸಿತು.