ಕಣಿವೆ, ಅ. ೧೧: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರೆಯಲಿದ್ದು ಅವರ ಕುರ್ಚಿ ಭದ್ರವಾಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಹೇಳಿದರು. ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿಯಲಿದ್ದಾರೆ ಎಂದು ವಿಪಕ್ಷಗಳು ಹಗಲುಕನಸು ಕಾಣುತ್ತಿವೆ. ಬಿಜೆಪಿ ಹಾಗೂ ಜೆಡಿಎಸ್ ಏನೇ ಷಡ್ಯಂತ್ರಗಳನ್ನು ಮಾಡಿದರೂ ಕೂಡ ರಾಜ್ಯದ ಜನತೆಗೆ ಸಿದ್ದರಾಮಯ್ಯ ಅವರು ಏನೆಂದು ಗೊತ್ತಿದೆ.

ಆಪರೇಷನ್ ಮಾಡಿ ಸರ್ಕಾರಗಳನ್ನು ಅತಂತ್ರಗೊಳಿಸಿ ವಾಮ ಮಾರ್ಗಗಳಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಗೆ ಈ ಬಾರಿ ಯಾವುದೇ ಆಪರೇಷನ್ ತಂತ್ರ ಸಫಲವಾಗುತ್ತಿಲ್ಲ. ಹಾಗಾಗಿ ದಿನ ಬೆಳಗಾದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬಗ್ಗೆ ಕಪೋಲಕಲ್ಪಿತ ಹೇಳಿಕೆಗಳನ್ನು ಕೊಡುವ ಮೂಲಕ ರಾಜ್ಯದ ಏಳುಕೋಟಿ ಜನರನ್ನು ನಂಬಿಸಲು ನಡೆಸುತ್ತಿರುವ ಹುನ್ನಾರ ಇದಾಗಿದೆ.

ಆದರೆ, ರಾಜ್ಯದ ಜನ ಈ ಹಿಂದೆ ವೀರೇಂದ್ರ ಪಾಟೀಲರಿಗೆ ನೀಡಿದ್ದ ಜನಾದೇಶದ ನಂತರ ಈ ಬಾರಿ ಸಿದ್ದು ಹಾಗೂ ಡಿಕೆಶಿಗೆ ೧೩೬ ಮಂದಿ ಶಾಸಕರನ್ನು ಆರಿಸಿ ಕಳುಹಿಸುವ ಮೂಲಕ ಸ್ಪಷ್ಟ ಜನಾದೇಶ ನೀಡಿರುವಾಗ ವಿಪಕ್ಷಗಳ ಯಾವ ತಂತ್ರಗಳೂ ಕೂಡ ಫಲಿಸುವುದಿಲ್ಲ ಎಂದು ಭೋಸರಾಜು ಹೇಳಿದರು. ಕೊಡಗು ಜಿಲ್ಲೆಯ ಎಲ್ಲಾ ಇಲಾಖೆಗಳಿಗೆ ಅಗತ್ಯವಿರುವ ಅನುದಾನಗಳನ್ನು ಸರ್ಕಾರದಿಂದ ತರಲಾಗುತ್ತಿದೆ.

ಸಣ್ಣ ನೀರಾವರಿ ಇಲಾಖೆಗೆ ಈ ಬಾರಿ ೩೦ ಕೋಟಿ ರೂಗಳ ಅನುದಾನ ನೀಡಲಾಗಿದೆ ಎಂದು ಉಸ್ತುವಾರಿ ಸಚಿವರು ಹೇಳಿದರು. ಗ್ಯಾರಂಟಿ ಯೋಜನೆಗಳ ಲಾಭ ಬಹಳಷ್ಟು ಮಂದಿಗೆ ಲಭಿಸುತ್ತಿದೆ. ಅಭಿವೃದ್ದಿ ಯೋಜನೆಗಳ ಅನುದಾನಕ್ಕೂ ಗ್ಯಾರಂಟಿ ಯೋಜನೆಗಳಿಗೂ ಯಾವ ಸಂಬAಧವೂ ಇಲ್ಲ; ಅನುದಾನಗಳು ನಿಂತಿಲ್ಲ. ಇದೇ ಮೊದಲ ಬಾರಿಗೆ ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಕಾರ್ಯಕ್ರಮಗಳಿಗೆ ಹೆಚ್ಚು ಅನುದಾನ ನೀಡಲಾಗಿದೆ.

ಭಾಗಮಂಡಲದಲ್ಲಿ ಕಳೆದ ೨೦ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮೇಲುಸೇತುವೆ ಯೋಜನೆಗೆ ಹೆಚ್ಚಿನ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸಲಾಗಿದೆ. ಹಾಗೆಯೇ ತಲ ಕಾವೇರಿ ಜಾತ್ರೆಗೂ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಸಚಿವರು ಹೇಳಿದರು. ಈ ಸಂದರ್ಭ ಕೂಡಾ ಅಧ್ಯಕ್ಷ ಪ್ರಮೋದ್, ಮಾಜಿ ಅಧ್ಯಕ್ಷ ಮಂಜುನಾಥ ಗುಂಡೂರಾವ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷಿö್ಮ ಇದ್ದರು.